ದಾವಣಗೆರೆ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರು ಉಚಿತವಾಗಿ ಸಂಚರಿಸುವ ಶಕ್ತಿ ಯೋಜನೆಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು KSRTC ಬಸ್ ಡ್ರೈವ್ ಮಾಡುವ ಮೂಲಕ ಚಾಲನೆ ನೀಡಿದರು.
ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ತಾತ್ಕಾಲಿಕ ಸಾರಿಗೆ ಬಸ್ ನಿಲ್ದಾಣದಲ್ಲಿ ದಾವಣಗೆರೆಯಿಂದ ಹರಿಹರಕ್ಕೆ ತೆರಳುವ ಬಸ್‌ನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಚಾಲನೆ ಮಾಡಿ ಶಕ್ತಿ ಯೋಜನೆ ಉದ್ಘಾಟಿಸಿದರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮಹಿಳೆಗೆ ಟಿಕೆಟ್ ನೀಡಿದರು
ನಂತರ ಮಾತನಾಡಿದ ಸಚಿವ ಮಲ್ಲಿಕಾರ್ಜುನ್ , ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಶಕ್ತಿ ನೀಡಲಾಗಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುವುದರಿಂದ ಸಾಕಷ್ಟು ಅನುಕೂಲ ಆಗಲಿದೆ. ದಿನ ನಿತ್ಯದ ಕೆಲಸ ಕಾರ್ಯ, ಸರ್ಕಾರಿ, ಖಾಸಗಿ ಕಚೇರಿಗಳ ಉದ್ಯೋಗಸ್ಥರು, ವಿದ್ಯಾರ್ಥಿನಿಯರು ಹಣ ನೀಡದೆ ಸಂಚರಿಸಬಹುದು. ಬಡವರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆ ದಾವಣಗೆರೆ ವಿಭಾಗೀಯ ನಿಯಂತ್ರಣಧಿಕಾರಿ ಸಿ.ಇ. ಶ್ರೀನಿವಾಸ್ ಮೂರ್ತಿ, ದಾವಣಗೆರೆ ವಿಭಾಗದಲ್ಲಿ ನ 368 ಮಾರ್ಗಗಳಲ್ಲಿ 62 ಬಸ್ ಮಾರ್ಗ ಹೊರತುಪಡಿಸಿ ಇನ್ನುಳಿದ 306 ಮಾರ್ಗಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಸಾಮಾನ್ಯ, ಎಕ್ಸ್‌ಪ್ರೆಸ್ ಬಸ್ ಗಳಲ್ಲಿ ಸಂಚರಿಬಹುದು. ಮಹಿಳೆಯರು ಉಚಿತವಾಗಿ ಸಂಚರಿಸುವ ಬಸ್ ಗಳಿಗೆ ಸ್ಟಿಕ್ಕರ್ ಅಂಟಿಸಲಾಗಿರುತ್ತದೆ ಅದೇ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಧಾರ್ ಕಾರ್ಡ್, ಫೋಟೋ ಇರುವಂತಹ ಯಾವುದಾದರೂ ಒಂದು ದಾಖಲೆ ತೋರಿಸಬೇಕು.ದಾವಣಗೆರೆ ವಿಭಾಗದಲ್ಲಿ ಮೂರು ಘಟಕಗಳಿಂದ ಪ್ರತಿದಿನ ಒಟ್ಟು 386 ಬಸ್‌ಗಳು ಸಂಚರಿಸುತ್ತಿವೆ. ಪ್ರತಿ ನಿತ್ಯ 1.50 ಲಕ್ಷ ಕಿ.ಮೀ. ಕ್ರಮಿಸಿ 1.25 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದರು.
ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಎಸ್. ಬಸವಂತಪ್ಪ, ಬಸವರಾಜ ಶಿವ ಗಂಗಾ, ಬಿ. ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಇಟ್ನಾಳ್ ಇದ್ದರು.



