ದಾವಣಗೆರೆ: ಬ್ರಿಟಿಷ್ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು ತನ್ನ ಬದುಕು, ಸರ್ವಸ್ವವನ್ನೇ ದೇಶಕ್ಕೆ ಅರ್ಪಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ತರ ಪಾತ್ರ ವಹಿಸಿದವರು ಮಹಾತ್ಮ ಗಾಂಧೀಜಿಯವರು ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಾ.ಮ.ಬಸವರಾಜಯ್ಯ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 152ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ವಿದ್ಯಾನಗರದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪ ಮಾಲೆ ಸಮರ್ಪಿಸಿ ಮಾತನಾಡಿದರು. ಗಾಂಧೀಜಿಯವರ ದೃಷ್ಟಿಯಲ್ಲಿ ಸ್ವಾರ್ಥದ ತ್ಯಾಗ ಮತ್ತು ಸೇವಾ ಮನೋಭಾವವೇ ಮಹತ್ವದ್ದಾಗಿತ್ತು. ಸತ್ಯ, ಧರ್ಮ, ನ್ಯಾಯ, ನಿಷ್ಠೆಗಳಿಂದ ಅಸಾಧಾರಣವಾದ ಗುರಿಯನ್ನು ಮುಟ್ಟಲು ಸಾದ್ಯವೆಂದು ಗಾಂಧೀಜಿಯವರು ನಂಬಿದ್ದರು ಎಂದು ಬಾ.ಮ. ಅವರು ತಿಳಿಸಿದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಬಿ.ವಾಮದೇವಪ್ಪ ಅವರು ಮಾತನಾಡಿ ಗಾಂಧೀಜಿಯವರು ಆದರ್ಶಮಯ ವ್ಯಕ್ತಿತ್ವವನ್ನು ಹೊಂದಿದ್ದ ವಿಶ್ವನಾಯಕರಾಗಿದ್ದರು. ಈಗಲೂ ವಿಶ್ವದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಗಾಂಧೀಜಿಯವರ ಅನುಯಾಯಿಗಳಿದ್ದಾರೆ. ಬಲ ಎನ್ನುವುದು ಶಾರೀರಿಕ ಸಾಮರ್ಥ್ಯದಿಂದ ಬರುವಂತದ್ದಲ್ಲ. ಅದು ನಮ್ಮಲ್ಲಿರುವ ಅದಮ್ಯವಾದ ಇಚ್ಛಾಶಕ್ತಿಯಿಂದ ಬರುವಂತದ್ದು ಎಂದು ಗಾಂಧೀಜಿಯವರು ನಂಬಿದ್ದರು. ಬ್ರಿಟೀಷರನ್ನು ಎದುರಿಸಲು ಸತ್ಯಾಗ್ರಹ, ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳಿಗೆ ಮನ್ನಣೆ, ಗ್ರಾಮೀಣ ಸ್ವಾವಲಂಬನೆ, ಅಸ್ಪೃಶ್ಯತೆಯ ನಿವಾರಣೆ, ಮದ್ಯಪಾನ ನಿಷೇದ, ದೇಶೀ ಭಾಷೆಗಳಿಗೆ ಉತ್ತೇಜನ ನೀಡುವುದು ಇವೇ ಮೊದಲಾದ ವಿಧಾಯಕ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಅಸಹಕಾರ ಚಳುವಳಿ, ಕಾಯಿದೆ ಭಂಗ ಹೋರಾಟ, ಆಮರಣ ಉಪವಾಸ, ಭಾರತ ಬಿಟ್ಟು ತೊಲಗಿ ಚಳುವಳಿ ಮೊದಲಾದ ವಿವಿಧ ಹಂತಗಳ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಗಾಂಧೀಜಿಯವರು ನಮಗೆಲ್ಲರಿಗೂ ಆದರ್ಶಪ್ರಾಯರು ಎಂದು ವಾಮದೇವಪ್ಪ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಬಿ.ದಿಲ್ಯಪ್ಪ, ಜಿ.ಆರ್.ಷಣ್ಮಖಪ್ಪ, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.



