ಡಿವಿಜಿ ಸುದ್ದಿ, ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಇಂದು ನೀರಾವರಿ ತಜ್ಞ ಪ್ರೊ. ನರಸಿಂಹಪ್ಪ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ಈ ಭೇಟಿ ವೇಳೆ ತುಂಗಾ ಮತ್ತು ಭದ್ರಾ ಜಲಾಶಯಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ ಪ್ರೊ. ನರಸಿಂಹಪ್ಪ ಅವರಿಂದ ಸಲಹೆ ಪಡೆದುಕೊಂಡರು. ಭದ್ರಾ ನೀರು ಕೊನೆಯ ಭಾಗದ ರೈತರಿಗೆ ಮುಟ್ಟಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ನೀರು ಪೋಲಾಗದಂತೆ ತಡೆಯಲು ಏನು ಕ್ರಮ ಕೈಗೊಳ್ಳಬೇಕು, ಪ್ರಾಧಿಕಾರ ಯಾವ ರೀತಿ ರೈತರ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ನರಸಿಂಹಪ್ಪ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ನೀವು ಕೊಟ್ಟ ಎಲ್ಲಾ ಸಲಹೆಗಳನ್ನು ಖಂಡಿತಾ ಕಾರ್ಯಗತಗೊಳಿಸುತ್ತೇನೆ. ನಿಮ್ಮ ಅನುಭವನ ಮಾತು ನಮಗೆ ಸ್ಫೂರ್ತಿ ನೀಡುತ್ತದೆ. ನಿಮ್ಮಂತವರ ಮಾರ್ಗದರ್ಶನದಿಂದ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್. ಎ ರವೀಂದ್ರನಾಥ್ ಮಾತನಾಡಿ, ಭದ್ರಾ ಅಚ್ಚುಕಟ್ಟುವಿನ ಕೊನೆಯ ಭಾಗದ ರೈತರಿಗೆ ನೀರು ತಲುಪದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸುಮಾರು ವರ್ಷಗಳಿಂದ ದುರಸ್ಥಿಯಾಗದೇ ಉಳಿದಿರುವ ಕಾಲುವೆ ಮತ್ತು ಹೊಲ ಕಾಲುವೆಗಳನ್ನು ದುರಸ್ಥಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.



