ದಾವಣಗೆರೆ; ಡಿಸೆಂಬರ್ ಅಂತ್ಯದೊಳಗೆ ಜಲಸಿರಿ ಕಾಮಗಾರಿಗಳನ್ನು ಪೂರ್ಣಗೊಳಿಸಿ 2024ರ ಮಾರ್ಚ್ ತಿಂಗಳ ಒಳಗೆ ಪ್ರಾಯೋಗಿಕ ಹಂತವನ್ನು ಮುಗಿಸಬೇಕು ಎಂದು ಸಂಸದರಾದ ಡಾ;ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಜಲಸಿರಿ 24/7 ನೀರಿನ ಯೋಜನೆ ಜಾರಿಗೆ ತರುತ್ತಿರುವ ಕೆ.ಯು.ಐ.ಡಿ.ಎಫ್.ಸಿ. (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ) ಅಧಿಕಾರಿಗಳು ಹಾಗೂ ನಗರ ಪಾಲಿಕೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಮಾಹಿತಿ ನೀಡಿ ಮೂರು ಕಡೆಗಳಲ್ಲಿ ಸಗಟು ನೀರು ಪೂರೈಕೆ ಜಾಲದ ಕಾಮಗಾರಿ ಬಾಕಿ ಇದೆ. ಹಳೇಕುಂದುವಾಡದ ಟ್ಯಾಂಕ್ ಕಾಮಗಾರಿ ನಡೆಸಲಾಗುತ್ತಿದೆ. 11 ಸಾವಿರ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕಿದೆ ಎಂದು ಹೇಳಿದರು. ಜಲಸಿರಿ ಯೋಜನೆ ಪೂರ್ಣಗೊಳಿಸಿದ ನಂತರ ಮೂರು ತಿಂಗಳವರೆಗೆ ಪ್ರಾಯೋಗಿಕ ಅವಧಿ ಇರುತ್ತದೆ. ನಂತರ ಯೋಜನೆಯನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಲಸಿರಿ ಕಾಮಗಾರಿಗಾಗಿ ಗುಂಡಿ ತೆಗೆದಾಗ ಸರಿಯಾಗಿ ಮುಚ್ಚುತ್ತಿಲ್ಲ. ಪದೇ ಪದೇ ಗುಂಡಿ ಅಗೆಯಲಾಗುತ್ತಿದೆ ಎಂದು ಆಕ್ಷೇಪಿಸಿದ ಸಂಸದರು, ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ನಗರದಲ್ಲಿ 97 ಸಾವಿರ ನಲ್ಲಿ ಸಂಪರ್ಕ ಕಲ್ಪಿಸಬೇಕಿದೆ. 86 ಸಾವಿರ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ಇನ್ನೂ 11 ಸಾವಿರ ನಲ್ಲಿಗಳ ಸಂಪರ್ಕ ಬಾಕಿ ಇದೆ ಎಂದು ಹೇಳಿದರು. ಜಲಸಿರಿ ಯೋಜನೆಯ ಉಪಯೋಜನಾ ನಿರ್ದೇಶಕ ವೀರೇಂದ್ರ ಕುಮಾರ್, ಜಲಸಿರಿ ಯೋಜನೆಯ ಕಾರ್ಯಕಾರಿ ಅಭಿಯಂತರ ರವಿಕುಮಾರ್, ಪಾಲಿಕೆಯ ಇ.ಇ. ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



