ಜಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ಸವಾರನಿಗೆ ಅಡ್ಡ ಬಂದ ಖದೀಮರ ಗ್ಯಾಂಗ್ , ಗಮನ ಬೇರೆ ಕಡೆ ಸೆಳೆದು ಬ್ಯಾಗ್ ನಲ್ಲಿದ್ದ 4.5 ಲಕ್ಷ ಕಳವು ಮಾಡಿದ ಘಟನೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಹಾಡ ಹಗಲೇ ಬೈಕ್‍ನಲ್ಲಿದ್ದ 4.5 ಲಕ್ಷ ನಗದು ಹಣವನ್ನು ಕಳ್ಳರ ತಂಡ ಎಗರಿಸಿ ಮಿಂಚಿನಂತೆ ಮಾಯವಾಗಿದ್ದಾರೆ. ಈ ಘಟನೆ ನಡೆದಿರುವುದು ಪಟ್ಟಣದ ಕೆನರಾ ಬ್ಯಾಂಕ್ ಎದುರು. ಕಳ್ಳರು ಹಣ ಎಗರಿಸಿ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ತಾಲ್ಲೂಕಿನ ಹನುಮಂತಾಪುರ ಗ್ರಾಮದ ಕೊಟ್ರೇಶ್ ಮಧ್ಯಾಹ್ನ ತನ್ನ ಹೆಂಡತಿ ಹಾಗು ಕುಟುಂಬದ ಸದಸ್ಯರ ಬಂಗಾರದ ಒಡವೆಗಳನ್ನು ಪಟ್ಟಣದ ಡಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟು ರೂ 4.5 ಲಕ್ಷ ಸಾಲ ಪಡೆದು, ಬ್ಯಾಂಕಿನಿಂದ ಹೊರಗೆ ಬಂದು ತನ್ನ ಬೈಕ್ ನ ಬ್ಯಾಗ್ ನಲ್ಲಿಟ್ಟುಕೊಂಡು ಕೇವಲ 100 ಮೀಟರ್ ಅಂತರದಲ್ಲಿರುವ ಕೆನರಾ ಬ್ಯಾಂಕ್ ಕಡೆಗೆ ತೆರಳುತ್ತಿದ್ದರು.
ಅಡವಿಟ್ಟು ಸಾಲ ಪಡೆದಿದ್ದ ಹಣವನ್ನು ಕೆನರಾ ಬ್ಯಾಂಕ್ ನಲ್ಲಿರುವ ತನ್ನ ಸಾಲವನ್ನು ಕಟ್ಟಲು ಮಾಡುವ ಉದ್ದೇಶದಿಂದ ಬೈಕ್ ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಬೈಕ್ ಗೆ ಅಡ್ಡ ಬಂದಂತೆ ಮಾಡಿ ಬೈಕ್ ಸವಾರನ ಗಮನವನ್ನು ಬೇರೆಡೆಗೆ ಸೆಳೆದು ಬೈಕ್ ನಲ್ಲಿದ್ದ ರೂ 4.5 ಲಕ್ಷ ನಗದು ಹಣವನ್ನು ಮಿಂಚಿನಂತೆ ಅಪಹರಿಸಿ ಮಾಯವಾಗಿದ್ದಾರೆ.
ಕೆನರಾ ಬ್ಯಾಂಕ್ ಹತ್ತಿರ ಬಂದು ನಗದು ಹಣವನ್ನು ತೆಗೆದುಕೊಳ್ಳಲು ಹೋದಾಗ ಹಣ ಕಳುವಾಗಿರುವುದು ಕೊಟ್ರೇಶ್ ಅವರಿಗೆ ಗಮನಕ್ಕೆ ಬಂದಿದೆ. ಈ ಪ್ರಕರಣ ಸಂಬಂಧ ಕೊಟ್ರೇಶ್ ಅವರು ಜಗಳೂರು ಪೊಲೀಸರಿಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಧಾವಿಸಿದ ಪೊಲೀಸರು ಸಿಸಿ ಟಿವಿಯನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.