ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮಾನ್ಯತೆ ರದ್ದುಪಡಿಸಿದ ಡಿಡಿಪಿಐ ಆದೇಶಕ್ಕೆ ಹೈಕೋರ್ಟ್ (high Court) ತಡೆಯಾಜ್ಞೆ ನೀಡಿದೆ ಎಂದು ಶಾಲೆಯ ಅಧ್ಯಕ್ಷ ಆರ್. ರೇವಣಸಿದ್ದಪ್ಪ ಮಾಹಿತಿ ನೀಡಿದ್ದಾರೆ.
ಆದೇಶದ ಪ್ರತಿ ಪ್ರದರ್ಶನ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 32 ವರ್ಷಗಳಿಂದ ಶಾಲೆ ನಡೆಸಲಾಗುತ್ತಿದೆ. ಶಾಲೆಗೆ ಪ್ರತಿ ವರ್ಷ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿದ್ದು, ಗುಣಮಟ್ಟದ ಶಿಕ್ಷಣ ಸೂಚಿಯಲ್ಲಿ ಎ ಗ್ರೇಡ್ ಪಡೆದಿದೆ. ಏಕಾಏಕಿ ಶಾಲೆ ಮಾನ್ಯತೆ ರದ್ಧತಿಯನ್ನು ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಆದೇಶದ ಪ್ರತಿ ಪ್ರದರ್ಶಿಸಿದರು.
ಪೋಷಕರು ಆತಂಕಬೇಡ
ಯಾರೋ ಒಬ್ಬ ದೂರಿನಿಂದ ಮೂಲಭೂತ ಸೌಕರ್ಯಗಳ ಕೊರತೆಯ ಆರೋಪದ ಮೇಲೆ ಶಿಕ್ಷಣ ಇಲಾಖೆ ಮಾನ್ಯತೆ ರದ್ದುಗೊಳಿಸಿತ್ತು. ಈ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಗೊಳಗಾಗಬಾರದು ಎಂದು ರೇವಣಸಿದ್ದಪ್ಪ ತಿಳಿಸಿದರು. ದೂರು ಸಲ್ಲಿಸಿದ ವ್ಯಕ್ತಿಯ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ರೇವಣಸಿದ್ದಪ್ಪ ಮೂಲಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಶಿಕ್ಷಕರಾದ ಕೆಂಚಪ್ಪ, ಹರೀಶ್, ಇಂದ್ರೇಶ್, ಶಕೀಲ್, ಪ್ರದೀಪ್, ಪೋಷಕರಾದ ಮಂಜಪ್ಪ, ಚಂದ್ರಪ್ಪ ಮೆಣಸಿನಕಾಯಿ ಇದ್ದರು.