ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆ ಹೊನ್ನಾಳಿ – ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ದರ್ಶನ್ ಅವರನ್ನು ಫ್ಯಾನ್ಸ್ ಮುಗಿಬಿದ್ದರು.
ರೇಣುಕಾಚಾರ್ಯ ಪತ್ನಿ, ಪುತ್ರಿ ಹಾಗೂ ಪುತ್ರರ ಜೊತೆ ತೆರೆದ ವಾಹನದಲ್ಲಿ ನಟ ದರ್ಶನ್ ಜತೆ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ದರ್ಶನ್, ರೇಣುಕಾಚಾರ್ಯ ಪರ ಘೋಷಣೆ ಕೂಗಿದರು. ನೆಚ್ಚಿನ ನಟನನ್ನು ನೋಡಲು ಹಳ್ಳಿ ಹಳ್ಳಿಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಡಿ ಬಾಸ್, ಡಿ ಬಾಸ್, ಹೊನ್ನಾಳಿ ಹುಲಿ ರೇಣುಕಾಚಾರ್ಯ, ಜೈ ಜೈ ಬಿಜೆಪಿ ಎಂಬ ಘೋಷಣೆ ಕೂಗಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ನಟ ದರ್ಶನ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಜನರ ಪರವಾಗಿ ಕೆಲಸ ಮಾಡುವ ರೇಣುಕಾಚಾರ್ಯ ಅವರನ್ನು ಗೆಲ್ಲಿಸಿ. ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಜನರ ಸೇವೆ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನಿಮಗಾಗಿ ಕೆಲಸ ಮಾಡುತ್ತಾರೆ. ಅಧಿಕಾರ ಇಲ್ಲದಿದ್ದರೂ ಬಡವರು, ಮತದಾರರಿಗಾಗಿ ಸೇವೆ ಮಾಡಿದರು. ನಿಮಗೆ ಸ್ಪಂದಿಸುವಂತಹ ಜನಪ್ರತಿನಿಧಿಯನ್ನು ಗೆಲ್ಲಿಸಿ. ಯಾವುದೇ ಕಾರಣಕ್ಕೂ ತಪ್ಪು ಮಾಡಲು ಹೋಗಬೇಡಿ ಎಂದರು.
ನ್ಯಾಮತಿ ಪಟ್ಟಣದಲ್ಲಿಯೂ ದರ್ಶನ್ ರೋಡ್ ಶೋದಲ್ಲಿ ಪಾಲ್ಗೊಂಡು ರೇಣುಕಾಚಾರ್ಯರ ಪರ ಮತಯಾಚಿಸಿದರು. ರೇಣುಕಾಚಾರ್ಯ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು.



