ದಾವಣಗೆರೆ: ಹಿಂದೂ ಮಹಾ ಗಣಪತಿ 5ನೇ ವರ್ಷದ ಮೂರ್ತಿ ವಿಸರ್ಜನೆ ಮೆರವಣಿಗೆ ಹಾಗೂ ಬೃಹತ್ ಶೋಭಾಯಾತ್ರೆ ನಗರದಲ್ಲಿಂದು ಅದ್ಧೂರಿಯಾಗಿ ಜರುಗಿತು. ಈ ಅದ್ಧೂರಿ ಮರೆವಣಿಗೆಯಲ್ಲಿ ಬೃಹತ್ ಜನ ಸಾಗರವೇ ಹರಿದು ಬಂದಿತ್ತು. ಯುವ ಸಮೂಹ ಡಿಜೆ ಸೌಂಡ್ ಗೆ ಕುಣಿದು ಸಂಭ್ರಮಿಸಿದರು.
ನಗರದ ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎವಿಕೆ ರಸ್ತೆ ಮೂಲಕ ವಿದ್ಯಾರ್ಥಿ ಭವನ, ಕೆಇಬಿ ವೃತ್ತ, ಜಯದೇವ ಸರ್ಕಲ್ , ಲಾಯರ್ ರಸ್ತೆ ಮೂಲಕ ಪಿ.ಬಿ ರಸ್ತೆಗೆ ಸೇರಿತು. ಪಿ.ಬಿ.ರಸ್ತೆಯಲ್ಲಿಂತೂ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕ, ಯುವತಿಯರು ಡಿಜೆ ಸಾಂಗ್ ಗೆ ತಕ್ಕಂತೆ ನೃತ್ಯ ಮಾಡಿ ಸಂಭ್ರಮಿಸಿದರು. ಈ ಬಾರಿಯ ಮೆರವಣಿಗೆಯಲ್ಲಿ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು. ಯುವಕರು ಪುನೀತ್ ಫೋಟೋ ಹಿಡಿದ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಮಾಜಿ ಮೇಯರ್ ಅಜಯ್ ಕುಮಾರ್, ಪಾಲಿಕೆ ಸದಸ್ಯ ಜೆ.ಎನ್ ಶ್ರೀನಿವಾಸ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶಂತ್ ರಾವ್ ಜಾಧವ್, ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಹಿಂದೂ ಮಹಾ ಗಣಪತಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿಗುರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಮರೆವಣಿಗೆ ವೇಳೆ ಮಾರ್ಗ ಮಧ್ಯೆ ವಿವಿಧ ಸಂಘಟನೆಗಳು ಆಹಾರ ಪೊಟ್ಟಣಗಳು, ನೀರು, ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಿಸುವ ಮೂಲಕ ಭಕ್ತರ ಹಸಿವು, ಬಾಯಾರಿಕೆ ನೀಗಿಸಿದವು.ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.



