ಡಿವಿಜಿ ಸುದ್ದಿ, ದಾವಣಗೆರೆ: ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಎನ್‌ಹೆಚ್‌ಎಂ ನೌಕರರು ನಡೆಸುತ್ತಿರುವ ಧರಣಿ 12 ನೇ ದಿನಕ್ಕೆ ಕಾಲಿಟ್ಟಿದೆ. ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದೆ ನೋಟಿಸ್ ನೀಡಿ ಗದಾ ಪ್ರಹಾರ ಪ್ರಾರಂಭಿಸಿದೆ. ಈ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೊರ ಗುತ್ತಿಗೆ ನೌಕರ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಾಲಸ್ವಾಮಿ, ನಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕೆಲಸ ಬಹಿಷ್ಕರಿಸಿ ಅನಿರ್ಧಷ್ಠಾವಧಿ ಮುಷ್ಕರಕ್ಕೆ ಕರೆಕೊಟ್ಟಿದ್ದು, ಅದರಂತೆ ಎಲ್ಲರೂ ಮನೆಯಲ್ಲಿಯೇ ಇದ್ದು, ಶಾಂತಿಯುತವಾಗಿ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಮುಂದುವರಿಸುತ್ತೇವೆ ಎಂದರು.
ಸರ್ಕಾರ ಅಧಿಕಾರಿಗಳ ಮೂಲಕ ಮುಷ್ಕರ ನಿರತ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದು ವಿಷಾದನೀಯ. ಈಗ ಸರ್ಕಾರವು ಹೆಚ್.ಆರ್. ಪಾಲಿಸಿಯನ್ನು ಅಂತಿಮಗೊಳಿಸಿ ವರದಿಯನ್ನು ನೀಡಲು ಮತ್ತೆ ಮೂರುತಿಂಗಳು ಸಮಯ ಕೇಳಿದಕ್ಕೆ ದಾವಣಗೆರೆ ಜಿಲ್ಲೆಯ ಅಧ್ಯಕ್ಷ ಸೇರಿದಂತೆ ಎನ್.ಹೆಚ್.ಎಂ ನೌಕರರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 3ತಿಂಗಳು ಗಡವು ಮುಗಿದರು ಕೂಡ ಮತ್ತೆ 3 ತಿಂಗಳು ಸಮಯ ಕೇಳುತ್ತಿರುವುದು ನೌಕರರ ಮೂಗಿಗೆ ತುಪ್ಪ ಸವರುತ್ತಿದೆ. ಇನ್ನು ಎಚ್ಚರಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಧ್ಯಾಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಾ.ಅಂದಾನಗೌಡ ಪಾಟೀಲ್, ಖಜಾಂಚಿ ಅಂಬರೀಷ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಹಾಗೂ ಸದಸ್ಯರು ಮತ್ತು ಸೋಷಿಯಲ್ ವರ್ಕರ್ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.



