Connect with us

Dvgsuddi Kannada | online news portal | Kannada news online

ದಾವಣಗೆರೆ: ಎಕ್ಸ್ ರೇ, ಸ್ಕ್ಯಾನ್‍ಗೆ ಹೆಚ್ಚಿನ ದರ ವಸೂಲಿ ಮಾಡುವ ಸಂಸ್ಥೆ ವಿರುದ್ಧ ದಂಡ ವಿಧಿಸುವಂತೆ ಡಿಸಿ ಖಡಕ್ ಸೂಚನೆ

ದಾವಣಗೆರೆ

ದಾವಣಗೆರೆ: ಎಕ್ಸ್ ರೇ, ಸ್ಕ್ಯಾನ್‍ಗೆ ಹೆಚ್ಚಿನ ದರ ವಸೂಲಿ ಮಾಡುವ ಸಂಸ್ಥೆ ವಿರುದ್ಧ ದಂಡ ವಿಧಿಸುವಂತೆ ಡಿಸಿ ಖಡಕ್ ಸೂಚನೆ

ದಾವಣಗೆರೆ:  ಕೋವಿಡ್-19 ಸೋಂಕು ತಪಾಸಣೆ ಕುರಿತಂತೆ ಎಕ್ಸ್‍ರೇ, ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನ್ ಮುಂತಾದ ಸೇವೆಯನ್ನು ನೀಡಲು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿನ ದರವನ್ನು ಸಾರ್ವಜನಿಕರಿಂದ ವಸೂಲಿ ಮಾಡಿದ ದಾವಣಗೆರೆ ನಗರದ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ 10 ರಿಂದ 50 ಸಾವಿರ ರೂ. ವರೆಗೆ ದಂಡ ವಿಧಿಸಿ, ದಂಡ ಮೊತ್ತವನ್ನು 10 ದಿನಗಳ ಒಳಗಾಗಿ ಸಂಗ್ರಹಿಸಿ ಸರ್ಕಾರಕ್ಕೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ (ಕೆಪಿಎಂಇ) ಕಾಯ್ದೆ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ, ಸಾರ್ವಜನಿಕರಿಗೆ ಆರ್ಥಿಕವಾಗಿ ಹೊರೆಯಾಗಬಾರದು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು, ಸಾರ್ವಜನಿಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಬಾರದು ಎಂಬ ಉದ್ದೇಶದಿಂದ ಎಕ್ಸ್‍ರೇ, ಸಿಟಿ ಸ್ಕ್ಯಾನ್ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳಿಗೆ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ನೀಡಿದ ಸೂಚನೆ ಹಾಗೂ ಆದೇಶ ಉಲ್ಲಂಘಿಸಿ, ವಿವಿಧ ಖಾಸಗಿ ಸಂಸ್ಥೆಗಳು ಹೆಚ್ಚಿನ ದರ ವಿಧಿಸಿರುವುದು ಕಂಡುಬಂದಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವ್ಯಾಪ್ತಿಯಲ್ಲಿ ಬರುವ ವಿಕಿರಣ ಸುರಕ್ಷತಾ ನಿರ್ದೇಶನಾಲಯ ಕಚೇರಿಯಿಂದ ಕಳೆದ ಸೆಪ್ಟಂಬರ್ 03 ರಂದು ವಿವಿಧ ಅಧಿಕಾರಿಗಳ ತಂಡವು ನಗರದ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಆಕಸ್ಮಿಕ ಭೇಟಿ ನೀಡಿ, ತಪಾಸಣೆ ನಡೆಸಿ, ವರದಿಯನ್ನು ಸಲ್ಲಿಸಿದ್ದು, ಈ ವರದಿಯನುಸಾರ ಹಲವು ಸಂಸ್ಥೆಗಳು ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಅಂತಹ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ, ಅದನ್ನು ಜಾರಿಗೊಳಿಸುವ ಸಲುವಾಗಿಯೇ ನಾನು ಇದ್ದೇನೆ, ಎಲ್ಲವನ್ನೂ ತಿಳಿದವರೇ ಕಾನೂನು ಉಲ್ಲಂಘಿಸುವುದು ಸರಿಯಲ್ಲ, ಕೋವಿಡ್ ಸಂದರ್ಭದಲ್ಲಿ ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡವರು, ಸಾರ್ವಜನಿಕರಿಂದ ನಿಯಮ ಬಾಹಿರವಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಣ ಲೂಟಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ (ಕೆಪಿಎಂಇ) ಕಾಯ್ದೆ ಅನುಷ್ಠಾನದ ನೋಡಲ್ ಅಧಿಕಾರಿ ಡಾ. ರೇಣುಕಾರಾಧ್ಯ ಅವರು, ತಪಾಸಣಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ನಗರದ ಹೆಗಡೆ ಡಯಾಗ್ನೋಸ್ಟಿಕ್ಸ್ ಸೆಂಟರ್ ಎಕ್ಸ್‍ರೆ ಮೊಬೈಲ್, ಎಕ್ಸ್‍ರೇ ಫಿಕ್ಸ್‍ಡ್ ಹಾಗೂ ಸಿಟಿ ಸ್ಕ್ಯಾನ್ ಉಪಕರಣ ಬಳಕೆಗೆ ಎಇಆರ್‍ಬಿ ಮಾನ್ಯತೆ ಹೊಂದಿರುವ ಪರವಾನಗಿ ಹೊಂದಿಲ್ಲದ ಕಾರಣ ನೋಟಿಸ್ ಜಾರಿಗೊಳಿಸಿ, ಸೀಜ್ ಮಾಡಲಾಗಿತ್ತು, ಆದರೆ ಅವರು ನಿಗದಿತ ಪ್ರಾಧಿಕಾರದ ಅನುಮತಿ ಪಡೆಯದೆ, ಸಂಸ್ಥೆಯನ್ನು ತೆರೆದು, ಸೇವೆ ಪುನರಾರಂಭಿಸಿರುವುದು ಕಂಡುಬಂದಿದೆ. ಅಲ್ಲದೆ ಎದೆಯ ಎಕ್ಸ್‍ರೇ ಹಾಗೂ ಹೆಚ್‍ಆರ್‍ಸಿಟಿ ಸ್ಕ್ಯಾನ್‍ಗೆ ಎಪಿಎಲ್, ಬಿಪಿಎಲ್ ಸೇರಿದಂತೆ ಎಲ್ಲ ವರ್ಗದವರಿಗೂ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿರುವುದು ಬಿಲ್ ಬುಕ್‍ನಿಂದ ಸಾಬೀತಾಗಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾನೂನು ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಹೀಗಾಗಿ ಹೆಗಡೆ ಡಯಾಗ್ನೋಸ್ಟಿಕ್ಸ್ ಸೆಂಟರ್ ಅವರಿಗೆ 50 ಸಾವಿರ ರೂ. ದಂಡ ವಿಧಿಸಬೇಕು, ಈ ಸಂಸ್ಥೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಸೂಚನೆ ನೀಡಿದರು. ಅಲ್ಲದೆ ದಂಡ ಪಾವತಿಯವರೆಗೂ ಕೆಪಿಎಂಇ ಅಥವಾ ಪಿಸಿ&ಪಿಎನ್‍ಡಿಟಿ ನಡಿ ಸಲ್ಲಿಸಿರುವ ಯಾವುದೇ ಮನವಿಯನ್ನು ಪುರಸ್ಕರಿಸಬಾರದು ಎಂದು ಸೂಚನೆ ನೀಡಿದರು.

ಅದೇ ರೀತಿ ನಗರದಲ್ಲಿರುವ ಸೌಖ್ಯದ ಆಸ್ಪತ್ರೆಯು ಎದೆಯ ಎಕ್ಸ್‍ರೇ ಸೇವೆಗಾಗಿ ರೂ. 250 ರ ಬದಲಿಗೆ 400 ರೂ. ವರೆಗೂ ಶುಲ್ಕ ವಸೂಲಿ ಮಾಡಿರುವುದು, ಬಿಲ್ ಬುಕ್‍ನಿಂದ ಸಾಬೀತಾಗಿದೆ, ಈ ಸಂಸ್ಥೆಗೆ 10 ಸಾವಿರ ರೂ. ದಂಡವನ್ನು ವಿಧಿಸಲಾಯಿತು. ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಹೆಚ್‍ಆರ್‍ಸಿಟಿ ಸ್ಕ್ಯಾನ್‍ಗಾಗಿ ಎಪಿಎಲ್, ಬಿಪಿಎಲ್ ಎನ್ನದೆ ಎಲ್ಲ ವರ್ಗದ ಸಾರ್ವಜನಿಕರಿಂದ 2500 ರೂ. ಗಳಿಂದ 3000 ರೂ. ವರೆಗೂ ವಸೂಲಿ ಮಾಡಿದೆ, ಅಲ್ಲದೆ ಸಿಟಿ ಸ್ಕ್ಯಾನ್‍ಗೂ ಕೂಡ ಹೆಚ್ಚಿನ ದರ ವಸೂಲಿ ಮಾಡಿರುವುದು ಸಾಬೀತಾಗಿದೆ. ಈ ಸಂಸ್ಥೆಗೂ 50 ಸಾವಿರ ರೂ. ದಂಡವನ್ನು ವಿಧಿಸಲಾಯಿತು. ನಗರದ ಸಿಟಿ ಹೈಟೆಕ್ ಇಮೇಜಿಂಗ್ ಸರ್ವೀಸ್ ಪ್ರೈ.ಲಿ. ಈ ಸಂಸ್ಥೆಯು ಕೂಡ ಹೆಚ್‍ಆರ್‍ಸಿಟಿ ಸ್ಕ್ಯಾನ್‍ಗಾಗಿ ಎಪಿಎಲ್, ಬಿಪಿಎಲ್ ಎನ್ನದೆ ಎಲ್ಲ ವರ್ಗದ ಸಾರ್ವಜನಿಕರಿಂದ 2500 ರೂ. ಗಳಿಂದ 5000 ರೂ. ವರೆಗೂ ವಸೂಲಿ ಮಾಡಿದೆ, ಅಲ್ಲದೆ ಸಿಟಿ ಸ್ಕ್ಯಾನ್‍ಗೂ ಕೂಡ ಹೆಚ್ಚಿನ ದರ ವಸೂಲಿ ಮಾಡಿರುವುದು ಸಾಬೀತಾಗಿರುವುದರಿಂದ ಈ ಸಂಸ್ಥೆಗೂ 50 ಸಾವಿ ರೂ. ದಂಡ ವಿಧಿಸಿದರು. ನಗರದ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಸಂಸ್ಥೆಯು ಕೋವಿಡ್ ರೋಗಿಗಳಿಂದ ಎದೆಯ ಎಕ್ಸ್‍ರೇ ಸೇವೆಗಾಗಿ 750 ರೂ. ವರೆಗೂ ಶುಲ್ಕ ವಸೂಲಿ ಮಾಡಿರುವುದು ಬಿಲ್ ಪ್ರತಿಯಿಂದ ಸಾಬೀತಾಗಿದ್ದು, ಈ ಸಂಸ್ಥೆಗೆ 25 ಸಾವಿರ ರೂ. ದಂಡ ವಿಧಿಸಲಾಯಿತು.

ದಂಡದ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಯವರಿಂದ 10 ದಿನಗಳ ಒಳಗಾಗಿ ವಸೂಲಿ ಮಾಡಿ, ಸರ್ಕಾರದ ಖಾತೆಗೆ ಜಮಾ ಮಾಡಬೇಕು. ದಂಡದ ಮೊತ್ತವನ್ನು ಪಾವತಿಸುವವರೆಗೂ ಸಂಬಂಧಪಟ್ಟ ಸಂಸ್ಥೆಯ ಕೆಪಿಎಂಇ ಅಥವಾ ಪಿಸಿ&ಪಿಎನ್‍ಡಿಟಿ ನಡಿ ಸಲ್ಲಿಸಿರುವ ಯಾವುದೇ ಮನವಿಯನ್ನು ಪುರಸ್ಕರಿಸಬಾರದು. ಅಧಿಕಾರಿಗಳು 20 ದಿನಗಳ ಬಳಿಕ ಮತ್ತೊಮ್ಮೆ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಆಕಸ್ಮಿಕ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಆಗಲೂ ಸಂಸ್ಥೆಯಿಂದ ಹೆಚ್ಚಿನ ದರ ವಸೂಲಿ ಹಾಗೂ ನಿಯಮ ಉಲ್ಲಂಘನೆ ನಡೆಯುತ್ತಿರುವುದು ಕಂಡುಬಂದಲ್ಲಿ, ಅಂತಹ ಸಂಸ್ಥೆಯನ್ನು ಸೀಜ್ ಮಾಡಿ, ವರದಿ ಸಲ್ಲಿಸಬೇಕು. ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಖಾಸಗಿ ಆಸ್ಪತ್ರೆಗಳು ನಿಗದಿತ ಮಾರ್ಗಸೂಚಿಯಂತೆ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗಾಗಿ ಸರ್ಕಾರ ನಿಗದಿಪಡಿಸಿರುವ ದರದಂತೆ ಮೊತ್ತವನ್ನು ಸಂಬಂಧಪಟ್ಟವರಿಗೆ ಪಾವತಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ್ ಅವರು ಮಾತನಾಡಿ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ (ಕೆಪಿಎಂಇ) ಕಾಯ್ದೆಯನ್ವಯ ಪ್ರತಿಯೊಂದ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ನೊಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಒಂದು ವೇಳೆ ನೊಂದಣಿ ಮಾಡಿಕೊಳ್ಳದೆ, ಕಾಯ್ದೆಯನ್ನು ಉಲ್ಲಂಘಿಸಿ, ವೈದ್ಯಕೀಯ ಸೇವೆ ನೀಡುವ ಸಂಸ್ಥೆಗಳ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು. ಸರ್ಕಾರದ ಸೂಚನೆಯಂತೆ ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ತಮ್ಮಲ್ಲಿ ಸೇವೆ ಸಲ್ಲಿಸುವ ವೈದ್ಯರು, ತಜ್ಞರು, ಸರ್ಕಾರಿ ವೈದ್ಯರು ಸೇವೆ ನೀಡುತ್ತಿದ್ದಲ್ಲಿ ಅವರ ವಿವರ, ಕಟ್ಟಡ ನಕ್ಷೆ ಮುಂತಾದ ವಿವರಗಳ ಚೆಕ್‍ಲಿಸ್ಟ್ ಅನ್ನು ಆರೋಗ್ಯ ಇಲಾಖೆಗೆ ಕೂಡಲೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಡಿಹೆಚ್‍ಒ ಡಾ. ನಾಗರಾಜ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಐಎಂಎ ಅಧ್ಯಕ್ಷ ಡಾ. ಸೋಮಶೇಖರ್ ಸೇರಿದಂತೆ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top