ದಾವಣಗೆರೆ: ಹರಿಹರ ಹಾಲಿ ಶಾಸಕರಾದ ಎಸ್. ರಾಮಪ್ಪ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷದ ನಾಯಕರು ಅಳೆದು, ತೂಗಿ ನೋಡುತ್ತಿದ್ದಾರೆ. ಕಾಂಗ್ರೆಸ್ ಪ್ರಕಟಿಸಿದ ಎರಡೂ ಪಟ್ಟಿಯಲ್ಲಿ ರಾಮಪ್ಪ ಹೆಸರಿಲ್ಲ. ಈ ಕ್ಷೇತ್ರ ಎಸ್.ರಾಮಪ್ಪ ಕೈ ತಪ್ಪುವುದು ನಿಶ್ಚಯವಾದಂತೆ ಕಾಣುತ್ತಿದೆ. ಇದರ ಮಧ್ಯೆಇದೀಗ ಈ ಕ್ಷೇತ್ರದ ಮೇಲೆ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ. ರೇವಣ್ಣ ಕಣ್ಣು ಬಿದ್ದಿದೆ.
ಹರಿಹರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಕಾಂಗ್ರೆಸ್ ತಲೆ ಬಿಸಿ ತಂದಿದೆ. ಹಾಲಿ ಶಾಸಕ ಎಸ್. ರಾಮಪ್ಪ ಸಹಿತ ಮೂರ್ನಾಲ್ಕು ಸ್ಥಳೀಯ ಅಕಾಂಕ್ಷಿಗಳಿದ್ದಾರೆ. ಈಗ ಮಾಜಿ ಸಚಿವ ಎಚ್.ಎಂ. ರೇವಣ್ಣ ಸಹ ಆಕಾಂಕ್ಷಿ ಆಗಿರುವುದು ಕುತೂಹಲ ಮೂಡಿಸಿದೆ.
ಹರಿಹರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ನೀಡುವಂತೆ ಪಕ್ಷದ ವರಿಷ್ಠರನ್ನು ಕೋರಿದ್ದೇನೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ. ಹರಿಹರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ಹೇರುತ್ತಿರುವ ಕಾರಣ ಪಕ್ಷದ ವರಿಷ್ಠರಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ ಎಂದು ರೇವಣ್ಣ ತಿಳಿಸಿದ್ದಾರೆ.
ಹಾಲಿ ಶಾಸಕ ರಾಮಪ್ಪನವರು ನಮ್ಮದೇ ಸಮುದಾಯದವರು. ಪಕ್ಷದಿಂದ ನಡೆಸಿದ ಸಮೀಕ್ಷೆಯಲ್ಲಿ ಅವರಿಗೆ ಟಿಕೆಟ್ ನೀಡಿದರೆ ಸೋಲಾಗುತ್ತದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನಾನು ಟಿಕೆಟ್ ಕೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.



