ದಾವಣಗೆರೆ: ತಾಯಿಯೊಬ್ಬರು ಒಂದಲ್ಲ, ಎರಡಲ್ಲ, ತ್ರಿವಳಿ ಮಕ್ಕಳಿಗೆ (Triplets Babies) ಜನ್ಮ ನೀಡಿದ ಅಪರೂಪದ ಘಟನೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರ್ಲಹಳ್ಳಿಯ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು, ದಾವಣಗೆರೆಯ ಚಾಮರಾಜಪೇಟೆಯ ಮಕ್ಕಳ ಆಸ್ಪತ್ರೆ ಅಪರೂಪದ ಘಟನೆ ಸಾಕ್ಷಿಯಾಗಿದೆ.
ವರ್ಲಹಳ್ಳಿಯ ಅನಿತಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಎರಡು ಗಂಡು, ಒಂದು ಹೆಣ್ಣು ಮಗು ಜನಿಸಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಇದೇ ಮೊದಲು ಎನ್ನಲಾಗಿದೆ.
ದಾವಣಗೆರೆ; ಭೂಪರಿವರ್ತನೆಯಾಗದ ಸೈಟ್, ಕಟ್ಟಡಗಳಿಗೆ ಮೇ.10ರವರೆಗೆ ಇ-ಖಾತಾ ಅಭಿಯಾನ
ನಾಲ್ಕೈದು ವರ್ಷಗಳಿಂದ ಈ ದಂಪತಿಗೆ ಮಕ್ಕಳು ಆಗಿರಲಿಲ್ಲ. ಗರ್ಭ ಧರಿಸಿದ್ದಾಗ ಸ್ಕ್ಯಾನ್ ನಲ್ಲಿಯೇ ಮೂರು ಮಕ್ಕಳಿರುವುದು ತಿಳಿದುಬಂದಿತ್ತು. ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿತ್ತು. ಫೆ. 28 ರಂದು ಸಂಜೆ ಆಸ್ಪತ್ರೆಗೆ ದಾಖಲಾಗಿದ್ದು, ಸಹಜ ಹೆರಿಗೆ ಪ್ರಯತ್ನಿಸಲಾಗಿತ್ತು. ಆದರೆ ಒಂದು ಮಗುವಿನ ಪೊರೆ ಒಡೆದು ಹೋಗಿದ್ದರಿಂದ ಸಿಸೇರಿಯನ್ ಮಾಡಿ ಮಕ್ಕಳನ್ನು ಹೊರತೆಗೆದಿದ್ದೇವೆ ಎಂದು ಡಾ.ಮಹೇಶ್ ಮಾಹಿತಿ ನೀಡಿದ್ದಾರೆ.
ನವಜಾತ ಶಿಶುಗಳು ಆರೋಗ್ಯಕರವಾಗಿದ್ದು, ಒಂದು ಮಗು 1 ಕೆಜಿ 900 ಗ್ರಾಂ, ಎರಡನೇ ಮಗು 1 ಕೆಜಿ 800 ಗ್ರಾಂ, ಮೂರನೇ ಮಗು 1 ಕೆಜಿ 600 ಗ್ರಾಂ ಇದೆ. ತಾಯಿ ಅನಿತಾ ಸಹ ಆರೋಗ್ಯವಾಗಿದ್ದಾರೆ.



