ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹನಿವೆಲ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಇಂಜಿನಿಯರಿಂಗ್ ವಿಭಾಗದಿಂದ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನೆರವೇರಿಸಲ್ಪಟ್ಟಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಭಾಗದ ಐಸಿಟಿ ಅಕ್ಯಾಡೆಮಿ ಮುಖ್ಯಸ್ಥ ವಿಷ್ಣು ಪ್ರಸಾದ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಹನಿವೆಲ್ ಸೆಂಟರ್ ಆಫ್ ಎಕ್ಸಲೆನ್ಸ್ ಕರ್ನಾಟಕದಲ್ಲಿ ಇದು ಒಂಬತ್ತನೇ ಕೇಂದ್ರವಾಗಿದ್ದು, ಹಲವು ಅಡಚಣೆಗಳನ್ನು ದಾಟಿ ಇಂದು ಜಿಎಂಐಟಿಯಲ್ಲಿ ಉದ್ಘಾಟನೆ ಗೊಳ್ಳುತ್ತಿರುವುದು ಸಂತೋಷದಾಯಕವಾಗಿದೆ ಎಂದು ತಿಳಿಸಿದರು.
ಕೇಂದ್ರದ ಮೂಲಕ ಹಲವು ಆಯೋಜಿಸುತ್ತಿದ್ದು, ಮೊದಲಿಗೆ ಕಂಪನಿಯು ಬಡತನ ರೇಖೆಗಿಂತ ಕೆಳಗಿರುವ ಅಂತಿಮ ವರ್ಷದ 120 ವಿದ್ಯಾರ್ಥಿಗಳನ್ನು ಗುರುತಿಸಿದ್ದು, ಅವರುಗಳಿಗೆ 15 ದಿನಗಳ ಎಡಬ್ಲ್ಯೂ ಎಸ್ ಕೋರ್ಸ್ಗಳ ಮೇಲೆ ತರಬೇತಿಯನ್ನು ನೀಡಿ ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡಲಾಗುವುದು ಮತ್ತು ತರಬೇತಿ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶವನ್ನು ಒದಗಿಸುವಲಾಗುವುದು ಎಂದು ತಿಳಿಸಿದರು.
ಜಿಎಂಐಟಿ ಕಾಲೇಜು ವಿವಿಧ ಪ್ರತಿಷ್ಠಿತ ಕಂಪನಿಗಳೊಡನೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಒಟ್ಟು 88 ಒಡಂಬಡಿಕೆಗಳು ಮತ್ತು 11 ಶ್ರೇಷ್ಠತಾ ಕೇಂದ್ರಗಳನ್ನು ಹೊಂದಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಕೈಗಾರಿಕಾ ತರಬೇತಿಯನ್ನು ನೀಡುತ್ತಿದ್ದು, ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುತ್ತಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಐಸಿಟಿ ಅಕ್ಯಾಡೆಮಿ ದಾವಣಗೆರೆ ವಿಭಾಗದ ಸಂಯೋಜಕರಾದ ಶ್ರೀ ಜಕಾವುಲ್ಲ, ಜಿಎಂಐಟಿ ಕಾಲೇಜಿನ ಡೀನ್ ಅಕಾಡೆಮಿಕ್ಸ್ ಮತ್ತು ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಬಿ ಎಸ್ ಸುನಿಲ್ ಕುಮಾರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೀರ್ತಿ ಪ್ರಸಾದ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



