ದಾವಣಗೆರೆ: ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ಎಲ್ಲಾ 80 ವಿದ್ಯಾರ್ಥಿಗಳು ಕಂಪನಿಗಳಿಗೆ ಆಯ್ಕೆಯಾಗುವುದರ ಮೂಲಕ ವಿಭಾಗದಲ್ಲಿ ಶೇಕಡ ನೂರರ ಪ್ಲೇಸ್ಮೆಂಟ್ ಆಗಿದೆ ಎಂದು ಪ್ರಾಂಶುಪಾಲ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ಉತ್ಪಾದನಾ ವಲಯದಲ್ಲಿ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ವಿಫಲ ಅವಕಾಶಗಳಿದ್ದು, ನಮ್ಮ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ವಿವಿಧ ಕಂಪನಿಗಳಾದ ಮಹೇಂದ್ರ ಸಿಐಇ, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ ಟೈಲ್ ಮಷೀನರಿ ಪ್ರೈವೇಟ್ ಲಿಮಿಟೆಡ್, ದಿವಗಿ ವಾರ್ನರ್, ದಿವಗಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಸುಗಫಿ ಎಂಜಿನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ, ಬಾಷ್ ಕಂಪನಿಯ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಪ್ರೊ. ತೇಜಸ್ವಿ ಕಟ್ಟಿಮನಿ ಟಿಆರ್ ತಿಳಿಸಿದರು.
ಇನ್ನೂ ಪ್ರತಿಷ್ಠಿತ ನಾಲ್ಕು ಕಂಪನಿಗಳ ಸಂದರ್ಶನ ಪ್ರಕ್ರಿಯೆಯು ನಡೆಯಲಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಆಫರ್ ಪಡೆಯಲಿದ್ದಾರೆ ಎಂದು ವಿಭಾಗದ ಮುಖ್ಯಸ್ಥ ಡಾ ಶ್ರೀನಿವಾಸ್ ಸಿವಿ ತಿಳಿಸಿದರು. ಮಧ್ಯ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಲವು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇದೀಗ ಮಧ್ಯ ಕರ್ನಾಟಕ ಭಾಗದ ಪ್ರತಿಷ್ಠಿತ ಜಿಎಂ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಹಾಗೂ ಶೇಕಡ ನೂರರ ಫಲಿತಾಂಶ ಪಡೆದ ವಿಭಾಗಕ್ಕೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ಸುಭಾಷ್ ಚಂದ್ರ ವೈ ಯು, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ಲೇಸ್ಮೆಂಟ್ ಸಂಯೋಜಕರುಗಳು, ಪ್ರಾಧ್ಯಾಪಕರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



