ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮಧ್ಯ ಕರ್ನಾಟಕದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅನಾವರಣಗೊಳಿಸಲಾಯಿತು.
ಧ್ವಜ ಕಂಬವು 50 ಮೀಟರ್ ಉದ್ದವಿದ್ದು, ಧ್ವಜವು 1200 ಚದರ ಅಡಿ ಅಳತೆ ಇದ್ದು, ಮಧ್ಯ ಕರ್ನಾಟಕ ಭಾಗದಲ್ಲೇ ಅತಿ ದೊಡ್ಡದಾಗಿದೆ. ಧ್ವಜದ ಗೌರವ ಮತ್ತು ಘನತೆಗೆ ಯಾವುದೇ ಚ್ಯುತಿ ಬಾರದಂತೆ ಎಚ್ಚರ ವಹಿಸಿ ಧ್ವಜವನ್ನು ಸ್ಥಾಪಿಸಲಾಗಿದೆ.
ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಅನಿತ್ ಕುಮಾರ್ ಜಿಎಸ್ ಸ್ವಾತಂತ್ರ ದಿನೋತ್ಸವದಂದು ಧ್ವಜ ಅನಾವರಣಗೊಳಿಸಲಾಯಿತು. ನಂತರ ಮಾತನಾಡಿ, ಯುವಕರು ದೇಶಾಭಿಮಾನ ಬೆಳೆಸಿಕೊಳ್ಳುವುದರ ಮೂಲಕ ಈ ದೇಶದ ಪ್ರಗತಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಸಾಕಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಯುವಕರು ತಮ್ಮ ಅಳಿಲು ಸೇವೆಯ ಮೂಲಕ ಕೈಜೋಡಿಸಬೇಕೆಂದು ಕರೆಕೊಟ್ಟರು. ನೆರೆದಿದ್ದ ಎಲ್ಲಾ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ದೇಶಾಭಿಮಾನ ಬೆಳಗಿಸಿದರು ಮತ್ತು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದ ನಂತರ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ವೈ. ಯು ಸುಭಾಷ್ ಚಂದ್ರ, ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಚ್. ಡಿ. ಮಹೇಶಪ್ಪ, ಜಿಎಂಐಟಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ ಸುನಿಲ್ ಕುಮಾರ್ ಬಿಎಸ್, ಜಿಎಂ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ ಶ್ರೀಧರ್ ಬಿ ಆರ್, ಜಿಎಂಎಸ್ ಅಕಾಡೆಮಿ ಕಾಲೇಜಿನ ಪ್ರಾಂಶುಪಾಲ ಶ್ವೇತಾ ಮರಿಗೌಡರ್, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ ಗಿರೀಶ್ ಬೋಳಕಟ್ಟಿ, ಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ ಓಂಕಾರಪ್ಪ ಎಚ್ ಎಸ್, ಜಿಎಂ ಆಂಗ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೀರಣ್ಣ, ಎಲ್ಲಾ ಕಾಲೇಜಿನ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



