ದಾವಣಗೆರೆ: ಭಾರತ ಬ್ರಿಟೀಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿ, ಅದರಂತೆಯೇ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಮಹಾತ್ಮಾ ಗಾಂಧೀಜಿ ಅವರು ಎಂದು ನಗರಾಬಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ನಗರದ ಶ್ರೀರಾಮನಗರ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿಯವರು ಅಹಿಂಸಾ ತತ್ವವನ್ನು ಅನುಸರಿಸುವುದೇ ಶ್ರೇಷ್ಠ ಮಾರ್ಗವೆಂದು ನಂಬಿ, ಅದನ್ನು ಮೈಗೂಡಿಸಿಕೊಂಡಿದ್ದರು. ಅದರಂತೆಯೇ ನಡೆದು, ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಇಂತಹ ಮಹಾನ್ ಚೇತನವನ್ನು ಸ್ಮರಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ದಾವಣಗೆರೆ ಜಿಲ್ಲೆಗೂ ಗಾಂಧೀಜಿಯವರ ನಂಟಿದ್ದು, 1934 ರಲ್ಲಿ ದಾವಣಗೆರೆಗೆ ಗಾಂಧೀಜಿಯವರು ಬಂದಿದ್ದು, ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಿದ್ದು, ಕಾಸಲ್ ಶ್ರೀನಿವಾಸ ಶೆಟ್ಟಿ ಮತ್ತು ಚನ್ನಗಿರಿಯ ರಂಗಪ್ಪ ಅವರ ನೆರವಿನಿಂದ ಹರಿಜನ ವಿದ್ಯಾರ್ಥಿಗಳಿಗಾಗಿ ಇಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಕಾರಣೀಭೂತರಾದ ಎಂದು ಸ್ಮರಿಸಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನೂ ಕೂಡ ಅತ್ಯಂತ ಹೆಮ್ಮೆಯಿಂದ ಇಡೀ ದೇಶ ಇಂದು ಆಚರಿಸುತ್ತಿದೆ. ದೇಶದ ಅಭಿವೃದ್ಧಿಗೆ ಶಾಸ್ತ್ರಿಜಿ ಅವರ ಕೊಡುಗೆ ಅಪಾರವಾಗಿದ್ದು, ಅವರು ದೇಶಕ್ಕೆ ನೀಡಿದ ‘ಜೈ ಜವಾನ್, ಜೈ ಕಿಸಾನ್’ ಕರೆ ದೇಶವನ್ನು ಸ್ವಾವಲಂಬಿಯಾಗಿಸಲು ಪ್ರೇರಣೆಯಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ಅಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸರಳತೆ ಹಾಗೂ ಸಜ್ಜನಿಕೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ತ್ಯಾಗ ಬಲಿದಾನದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ದೇಶ ಸಂಕಷ್ಟದಲ್ಲಿದ್ದಾಗ ಪ್ರತಿ ಸೋಮವಾರ ಊಟವನ್ನು ತ್ಯಜಿಸುವ ಮೂಲಕ ಬಡವರಿಗೂ ಆಹಾರ ದೊರೆಯುವಂತೆ ಮಾಡೋಣ ಎಂದು ಗಾಂಧೀಜಿ ನೀಡಿದ್ದ ಕರೆಯನ್ನು ಶಾಸಕರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಲಾಲ್ ಬಹದ್ದೂರ್ ಶಾಸ್ತ್ರಿಜಿಯವರು ಈ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿಯಾಗಿದ್ದರು ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರಪಾಲಿಕೆ ಉಪಮೇಯರ್ ಶಿಲ್ಪಾ ಜಯಪ್ರಕಾಶ್, ಧೂಡಾ ಆಯುಕ್ತ ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುಶ್ರಾವ್ಯ ಗಾಂಧಿ ಪ್ರಿಯ ಗಾಯನ : ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವಜನತೋ, ಸೇರಿದಂತೆ ಇತರೆ ಗೀತೆಗಳ ಸುಶ್ರಾವ್ಯ ಗಾಯನ ಪ್ರಸ್ತುತಪಡಿಸಿದರು. ಸಿದ್ದಗಂಗಾ ಸಂಸ್ಥೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು.
ಬಹುಮಾನ ವಿತರಣೆ : ಗಾಂಧಿ ಭವನದ ಆವರಣದಲ್ಲಿ ನಿರ್ಮಿಸಲಾಗಿರುವ ಗಾಂಧೀಜಿಯವರ ಜೀವನ ಬಿಂಬಿಸುವ ವಿವಿಧ ಸುಂದರ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟ ಕಲಾವಿದರಾದ ಪರಶುರಾಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರ ಜನ್ಮ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ್ ಶೀರ್ಷಿಕೆಯಡಿ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಏರ್ಪಡಿಸಿದ ಮ್ಯಾರಾಥಾನ್ ಓಟ ಸ್ಪರ್ಧೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ವಿತರಣೆ ಮಾಡಲಾಯಿತು. ಮಹಾನಗರಪಾಲಿಕೆಯ ಸಫಾಯಿ ಕರ್ಮಚಾರಿ ಕಾರ್ಡ್ ಫಲಾನುಭವಿ ಕಾರ್ಡ್ಗಳನ್ನು ಪೌರಕಾರ್ಮಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು.
ಫೋಟೋ ಸ್ಪಾಟ್ ಆದ ಗಾಂಧಿ ಭವನ : ನೂತನವಾಗಿ ನಿರ್ಮಿಸಲಾಗಿರುವ ಗಾಂಧಿ ಭವನಕ್ಕೆ ಆಗಮಿಸಿದ್ದ ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು, ಸಾರ್ವಜನಿಕರು, ಗಾಂಧಿವಾದಿಗಳು ಇಲ್ಲಿನ ಗಾಂಧೀಜಿಯವರ ಪುತ್ಥಳಿ, ಚರಕ ತಿರುಗಿಸುವ ಗಾಂಧೀಜಿ, ದಂಡಿಯಾತ್ರೆ ಬಿಂಬಿಸುವ ಕಲಾಕೃತಿ ಸೇರಿದಂತೆ ವಿವಿಧ ಕಲಾಕೃತಿಗಳ ಬಳಿ ನಿಂತು ಫೋಟೋ ತೆಗೆಯಿಸಿಕೊಳ್ಳಲು ಮುಗಿಬಿದ್ದಿದ್ದು ಕಂಡುಬAದಿತು. ಖುದ್ದು ಸಚಿವರು, ಜಿಲ್ಲಾಧಿಕಾರಿಗಳು, ಸೇರಿದಂತೆ ಹಲವರು ಕೂಡ ವಿವಿಧ ಕಲಾಕೃತಿಗಳ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು ವಿಶೇಷವೆನಿಸಿತು.