ದಾವಣಗೆರೆ: 2021-22ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸದಾಗಿ ಮೀನು ಕೃಷಿ ಕೊಳ ನಿರ್ಮಾಣ, ಆರ್.ಎ.ಎಸ್ ಘಟಕಗಳ ನಿರ್ಮಾಣ, ತಾಜಾ ಮೀನು ಮಾರಾಟ ಕೇಂದ್ರಗಳ ಸ್ಥಾಪನೆ. ಮೀನು ಸಾಗಣೆ ಮತ್ತು ಮಾರಾಟ ವಾಹನಗಳ ಖರೀದಿಗೆ ಸಹಾಯಧನ ಮತ್ತಿತರ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ.15 ಕೊನೆಯ ದಿನವಾಗಿದ್ದು, ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಅಜಿಗಳನ್ನು ಸಲ್ಲಿಸಬೇಕು. ಮೀನುಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಜಮೀನಿನಲ್ಲಿ ಕನಿಷ್ಠ 2 ಸಾವಿರ ಚ.ಮೀ ಮೀನು ಕೃಷಿ ಕೈಗೊಳ್ಳಲು ಕೊಳ ನಿರ್ಮಾಣಕ್ಕೆ ಸಹಾಯ, ಮೀನು ಮಾರಾಟ ಮತ್ತು ಮತ್ಸ್ಯವಾಹಿನಿಗೆ ಸಹಾಯ ಸೌಲಭ್ಯವನ್ನು ಜಿಲ್ಲಾ ಪಂಚಾಯತ್ ಯೋಜನೆಯಡಿ ನೀಡಲಾಗುವುದು.
ರಾಜ್ಯ ವಲಯ ಯೋಜನೆಗಳಾದ ಮೀನುಗಾರಿಗೆ ಸಲಕರಣೆ ಕಿಟ್‍ಗೆ ಸಹಾಯ, ಫೈಬರ್ ಗ್ಲಾಸ್ ಹರಿಗೋಲು ವಿತರಣೆ, ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯಕೃಷಿ ಆಶಾಕಿರಣ ಯೋಜನೆ ಮತ್ತು ಸೀಗಡಿ ಮತ್ತು ಹಿನ್ನೀರು ಮೀನುಕೃಷಿ ಪ್ರೋತ್ಸಾಹ ಕಾರ್ಯಕ್ರಮ ಮತ್ತು ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ವೈಯಕ್ತಿಕ ಮೀನು ಕೃಷಿಕರಿಗೆ ಮೀನುಮರಿ ಖರೀದಿಗೆ ಸಹಾಯ ಯೋಜನೆಯಡಿ ನೀಲಿಕ್ರಾಂತಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ರಷ್ಟು ಸಹಾಯಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಗಣೇಶ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



