ದಾವಣಗೆರೆ; ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ಟೆಹಳ್ಳಿ ಸಮೀಪದ ಮಾವಿನ ತೋಟವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಫಲಕ್ಕೆ ಬಂದ 50 ಗಿಡಗಳು ಸುಟ್ಟು ಭಸ್ಮವಾಗಿದ್ದು, 2 ಲಕ್ಷರೂ. ನಷ್ಟ ಸಂಭವಿಸಿದೆ.
ರೈತ ಮೊಹಮ್ಮದ್ ಜಬೀವುಲ್ಲಾ ಹಾಗೂ ಸಹೋದರಿಗೆ ಸೇರಿದ 2 ಎಕರೆ 17 ಗುಂಟೆ ಜಮೀನಿನಲ್ಲಿ 135 ಸಸಿಗಳನ್ನು ನಾಟಿ ಮಾಡಿದ್ದರು. 50ಕ್ಕೂ ಹೆಚ್ಚು ಮರ ಬೆಂಕಿಗೆ ಆಹುತಿಯಾಗಿವೆ. ಫಲಭರಿತ ಮಾವು ಕೈಗೆ ಸಿಗದಂತಾಗಿದೆ.ಕಳೆದ ವರ್ಷ 2.5 ಲಕ್ಷ ರೂ. ಆದಾಯ ಬಂದಿತ್ತು. ಈ ಸಲ ಬೆಂಕಿಯಿಂದ ಮರದ ಜೊತೆ ಸಮೃದ್ಧವಾಗಿದ್ದ ಫಸಲು ಸುಟ್ಟು ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ, ಪರಿಶೀಲಿಸಿ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮೊಹಮ್ಮದ್ ಜಬೀವುಲ್ಲಾ ಆಗ್ರಹಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ.



