ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ ಬಗ್ಗೆ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿತ್ತು. ಇದನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ಷೇಪಿಸಿದ್ದರು. ಈ ಹಿನ್ನೆಲೆ ಸಹಾಯಕ ಚುನಾವಣಾಧಿಕಾರಿ ಸ್ಪಷ್ಟನೆ ಕೋರಿ ಶಾಮನೂರು ಶಿವಶಂಕರಪ್ಪ ಅವರಿಗೆ ನೋಟಿಸ್ ನೀಡಿದ್ದರು.
ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟನೆ ನೀಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಮಹಿಳೆಯರ ಕುರಿತ ನನ್ನ ಹೇಳಿಕೆಯನ್ನು ನನಗೆ ಆಗದವರು ದ್ವೇಷದಿಂದ ತಿರುಚಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ನಮ್ಮ ಪಕ್ಷದ ದಿ.ಇಂದಿರಾ ಗಾಂಧಿಯವರು ಸಾಬೀತುಪಡಿಸಿದ್ದಾರೆ.
ಅದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಮಹಿಳೆಯರೇ ಸ್ಪರ್ಧಿಸಿದ್ದು, ನಿಮ್ಮ ಸಮಸ್ಯೆಯನ್ನು ದೆಹಲಿಯವರೆಗೆ ತಲುಪಿಸುವವರಿಗೆ ಮತ ನೀಡಿ ಎಂದು ಹೇಳಿದ್ದ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರಗೆ ಮಾತನಾಡಲು ಬರಲ್ಲ, ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಹೀಗಾಗಿ ನಮ್ಮ ಕೈ ಮೇಲಿದೆ ಎಂದಿದ್ದರು. ಇದು ವಿವಾದ ಸೃಷ್ಠಿಯಾಗಿತ್ತು.



