ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಬೆಳೆ ಕಳೆದುಕೊಂಡಿರುವ ಎಲ್ಲಾ ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಪ್ರಥಾಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ 90 ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಪರಿಹಾರ ಸರ್ಕಾರ ಜಿಲ್ಲಾಡಳಿತಕ್ಕೆ 97 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಪರಿಹಾರ ನೀಡಲಾಗಿದೆ. ಯಾರಿಗೆ ಪರಿಹಾರ ಸಿಕಿಲ್ಲವೋ ಅವರಿಗೆ ಶೀಘ್ರವೇ ಪರಿಹಾರ ತಲುಪಿಸಲಾಗುವುದು. ವಿಧಾನ ಪರಿಷತ್ ಚುನಾವಣೇ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ. ನಾನು ಮಳೆಯಿಂದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಆದರೆ, ಜಿಲ್ಲಾಧಿಕಾರಿ, ಸಿಇಒ ಮತ್ತು ಎಸ್‌ಪಿ ಅವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳೆ ಹಾನಿ ಪರಿಹಾರವನ್ನು ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ 90 ಕೋಟಿ ರೂ. ಮೌಲ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಒಳಗಾಗಿರುವುದು ತಿಳಿದು ಬಂದ್ದು, ಅಧಿಕಾರಿಗಳಿಂದ ಇನ್ನೊಮ್ಮೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ.ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಮಳೆಯಲ್ಲಿ ಸಿಲುಕಿ, ಗೋಡೆ ಕುಸಿದು ಮೃತಪಟ್ಟ ಮೂರು ಜನರಿಗೆ ಈಗಾಗಲೇ ಸಂಪೂರ್ಣ ಪಡಿಹಾರ ನೀಡಲಾಗಿದ್ದು, ಇನ್ನೂ ಇಬ್ಬರು ರೈತರು ಬೆಳೆ ಹಾನಿಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅವರಿಗೂ ಪರಿಹಾರ ಕೊಡಲಾಗುವುದು.



