ದಾವಣಗೆರೆ: ಕಂದಾಯ ಜಮೀನಲ್ಲಿರುವ ಜಿಲ್ಲೆಯಲ್ಲಿ ಸುಮಾರು 65 ಸಾವಿರ ನಿವೇಶನ ಮತ್ತು ಮನೆಗಳಿಗೆ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಡು ಬಡವರಿಗೆ ನಿವೇಶ ಹಂಚಿಕೆ ಮಾಡುವಂತೆ ಮೇಯರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಲೇ ಎರಡ್ಮೂರು ಸಭೆ ನಡೆಸಲಾಗಿದೆ. ಕಂದಾಯ ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಬಜೆಟ್ ನಲ್ಲಿ ಯೋಜನೆ ರೂಪುಗೊಳಿಸಲಾಗುತ್ತಿದೆ ಎಂದರು .
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ 18 ಮನೆಗಳು ಕುಸಿದಿವೆ. ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಲು ಈಗಾಗಲೇ ಸೂಚಿಸಿದ್ದೇನೆ. ಸುಮಾರು 50 ಎಕರೆ ಬೆಳೆಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ ಅಡಿಯಲ್ಲಿ 125 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ನೀಲನಕ್ಷೆ ತಯಾರಿಸಿದ್ದು, ಅದಕ್ಕೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿವೆ. ₹ 120 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿದೆ. ಅದಕ್ಕೆ ಜ.18ರಂದು ಭೂಮಿಪೂಜೆ ನೆರವೇರಿಸಲಾಗುವುದು. ಇನ್ನು ಚಿಗಟೇರಿ ಆಸ್ಪತ್ರೆ ಪುರಾತನವಾದುದು. ಹೊಸ ಕಟ್ಟಡ ನಿರ್ಮಾಣ ಅಗತ್ಯವಿದೆ. ಈ ಬಾರಿಯ ಬಜೆಟ್‌ನಲ್ಲಿ ನವೀಕರಣಕ್ಕೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಈವರೆಗೆ ₹ 300 ಕೋಟಿಯ ಕಾಮಗಾರಿಗಳು ನಡೆದಿವೆ. ಇನ್ನೂ ₹ 650 ಕೋಟಿಯ ಕಾಮಗಾರಿ ಅನುಷ್ಠಾನಗೊಂಡಿಲ್ಲ. ಎಲ್ಲ ಕಾಮಗಾರಿ ನಡೆಯುತ್ತಿವೆ. ಮಾರ್ಚ್ ಒಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.15 ಕೋಟಿ ಅನುದಾನದಲ್ಲಿ ಕುಂದವಾಡ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.



