ದಾವಣಗೆರೆ: ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆ ನಗರದ ಹೊರ ವಲಯದ ಆವರಗೆರೆಯ ಬಡಾವಣೆಯೊಂದರ ನಕ್ಷೆ ರದ್ದುಪಡಿಸಲು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ನಿರ್ಧಾರ ಕೈಗೊಂಡಿದೆ.
ಆವರಗೆರೆ ಗ್ರಾಮದ ಸರ್ವೇ ನಂ.227ರ 9 ಎಕರೆ 37ಗುಂಟೆ ಪ್ರದೇಶದದಲ್ಲಿ ನಿರ್ಮಾಣ ಮಾಡಿರುವ ಅಂಬಿಕಾ ಬಡಾವಣೆ, ನಿಯಮ ಬಾಹಿರವಾಗಿ ನಕ್ಷೆ ಸಿದ್ಧಪಡಿಸಿದ ಹಿನ್ನಲೆ ನಕ್ಷೆ ರದ್ದುಪಡಿಸಲು ತೀರ್ಮಾನಿಸಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
- ಆವರಗೆರೆಯ ಅಂಬಿಕಾ ಬಡಾವಣೆ ನಕ್ಷೆ ರದ್ದು
- ಉದ್ಯಾನವನಕ್ಕೆ ಸ್ಥಳ ಕಾಯ್ದಿರಿಸದೇ ನಕ್ಷೆ ಅನುಮೋದನೆ ಆರೋಪ
- ಹರಿಹರ ಗ್ರೀನ್ ಸಿಟಿಯಲ್ಲಿ ದೂಡಾ ಜಾಗ ಅತಿಕ್ರಮಣ
- ಗ್ರೀನ್ ಸಿಟಿ ಬಡಾವಣೆ ಮಾಲೀಕರಿಗೆ ನೋಟಿಸ್
- ನೋಟಿಸ್ ಗೆ ಉತ್ತರಿದ ಹಿನ್ನೆಲೆ ನಿಯಮಾನುಸಾರ ಕಾನೂನು ಕ್ರಮ
2018ರ ಏಪ್ರಿಲ್ 2 ರಂದು ನಗರ ಯೋಜನಾ ಸದಸ್ಯರು ಹಾಗೂ ಆಯುಕ್ತರು ಸಹಿ ಮಾಡಿರುವ ನಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ.
2024ರ ಸೆಪ್ಟಂಬರ್ 4ರಂದು ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಡಾವಣೆ ನಕ್ಷೆಯಲ್ಲಿ ಉದ್ಯಾನವನಕ್ಕೆ ಸ್ಥಳ ಕಾಯ್ದಿರಿಸದೇ ವಿವಾದಿತ ನಿವೇಶನಗಳು ಎಂದು ನಮೂದಿಸಲಾಗಿದೆ. ಈ ಬಡಾವಣೆಗೆ ಅಂತಿಮ ವಿನ್ಯಾಸ ಅನುಮೋದನೆಯಾಗಿರುವುದಿಲ್ಲ. ಆದ್ದರಿಂದ ಈ ಬಡಾವಣೆ ನಕ್ಷೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಹರಿಹರ ನಗರದ ಗ್ರೀನ್ ಸಿಟಿ ಬಡಾವಣೆಯ ಮಾಲೀಕರು ದೂಡಾ ಜಾಗ ಅತಿಕ್ರಮಣ ಮಾಡಿರುವ ಬಗ್ಗೆ ತಿಳಿದು ಬಂದಿದೆ. ನಾಗರಿಕ ಸೌಲಭ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಬಡಾವಣೆ ಮಾಲೀಕರು ಅತಿಕ್ರಮಣ ಮಾಡಿ ಅನಧಿಕೃತವಾಗಿ ಪವರ್ ಗ್ರಿಡ್ ನಿರ್ಮಿಸಿದ್ದಾರೆ. ತೆರವುಗೊಳಿಸಲು ಈಗಾಗಲೆ ಎರಡು ನೋಟೀಸ್ ನೀಡಲಾಗಿದೆ. ಇದಕ್ಕೆ ಸೂಕ್ತ ಉತ್ತರ ಬಾರದ ಹಿನ್ನೆಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಸದಸ್ಯರಾದ ವಾಣಿ ಬಕ್ಕೇಶ್, ಅಬ್ದುಲ್ ಜಬ್ಬಾರ್ ಖಾನ್ ಮತ್ತಿತರರು ಇದ್ದರು.



