ದಾವಣಗೆರೆ: ಅಕ್ರಮ-ಸಕ್ರಮ ಯೋಜನೆಯಡಿ ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಪರಿವರ್ತಕ (ಟಿಸಿ), ಕಂಬ ಅಳವಡಿಸಲು ರೈತರಿಂದ 25 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
- ವಿದ್ಯುತ್ ಪರಿವರ್ತಕ (ಟಿಸಿ)ಅಳವಡಿಸಲು ಲಂಚಕ್ಕೆ ಬೇಡಿಕೆ
- ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್ ಅಮಾನತು
- ಲಂಚಕ್ಕೆ ಬೇಡಿಕೆ ಇಟ್ಟ ಆಡಿಯೋ ವೈರಲ್ ಹಿನ್ನೆಲೆ ಕ್ರಮ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋವನ್ನು ಗುತ್ತಿಗೆದಾರರಾದ ಭಾನುವಳ್ಳಿ ಮಂಜುನಾಥ ಮತ್ತು ಮಲ್ಲನಾಯಕನಹಳ್ಳಿ ಬಸವರಾಜ್ ನ.19 ರಂದು ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.
ಈ ಪ್ರಕರಣ ಪರಿಶೀಲಿಸಿದ ದಾವಣಗೆರೆಯ ಬೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿಜಿನಿಯರ್ ಎಸ್.ಕೆ.ಪಾಟೀಲ್ ಅವರು, ಶಾಖಾಧಿಕಾರಿ ವಿನಯ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದಲ್ಲದೆ, ಹರಿಹರ ಬೆಸ್ಕಾಂ ಇಇ ಮತ್ತು ಎಇಇ ವಿರುದ್ಧ ಸಹ ಆರೋಪ ಕೇಳಿ ಬಂದಿದ್ದು, ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.



