Connect with us

Dvgsuddi Kannada | online news portal | Kannada news online

ದಾವಣಗೆರೆ:ಆಡಳಿತ ವಲಯ, ಜನಸಾಮಾನ್ಯರು ಬೆರೆತರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಜಿಲ್ಲಾಧಿಕಾರಿ ಶಿವಾನಂದ ಕಪಾಶಿ

ದಾವಣಗೆರೆ

ದಾವಣಗೆರೆ:ಆಡಳಿತ ವಲಯ, ಜನಸಾಮಾನ್ಯರು ಬೆರೆತರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಜಿಲ್ಲಾಧಿಕಾರಿ ಶಿವಾನಂದ ಕಪಾಶಿ

ದಾವಣಗೆರೆ: ಆಡಳಿತ ವಲಯ ಮತ್ತು ಜನಸಾಮಾನ್ಯರು ಬೆರೆತರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಹೇಳಿದರು.

ದಾವಣಗೆರೆ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೋಸ್ಕರವೇ ಸರ್ಕಾರವಿದೆ. ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಆಡಳಿತ ವ್ಯವಸ್ಥೆಯನ್ನು ಅನೇಕ ಇಲಾಖೆ ಹಾಗೂ ನಿಗಮಗಳನ್ನಾಗಿ ವಿಂಗಡಿಸುವ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅನುದಾನ ಒದಗಿಸುತ್ತಿದೆ. ವಿವಿಧ ಯೋಜನೆಗಳ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಬುಳ್ಳಾಪುರ ಗ್ರಾಮದ ರಸ್ತೆ, ಚರಂಡಿ, ಒಳ ಚರಂಡಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತು ನೀಡಲಾಗುವುದು. ಮುಖ್ಯವಾಗಿ ಗ್ರಾಮದ ಶಾಲೆಯ ಕೊಠಡಿ, ಶೌಚಾಲಯ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಮಹತ್ವ ನೀಡಲಾಗುವುದು. ಊರಿನವರ ಪ್ರಮುಖ ಬೇಡಿಕೆಯಾದ ಸ್ಮಶಾನ ಜಾಗದ ವಿಷಯದಲ್ಲಿ ಕಾನೂನು ತೊಡಕುಗಳಿದ್ದು ಬಗೆಹರಿಸಲು ಶ್ರಮಿಸಲಾಗುವುದು, ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರ ಮಹಿಳೆಯರು ಹಾಗೂ ಮಕ್ಕಳ ಪೌಷ್ಟಿಕತೆಗೆ ಒತ್ತು ನೀಡಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ, ಕಾಲಕಾಲಕ್ಕೆ ವಿವಿಧ ಚುಚ್ಚುಮದ್ದುಗಳನ್ನು ನೀಡುವ ಮೂಲಕ ಶಿಶುಮರಣ, ತಾಯಿ ಮರಣ ಗಣನೀಯವಾಗಿ ತಗ್ಗಿದೆ, ವಿದ್ಯಾರ್ಥಿ ವೇತನ, ಅಂಗವಿಕಲ ವೇತನ, ವಿಧವಾವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡಿದೆ.ಈ ಎಲ್ಲಾ ಯೋಜನೆಗಳನ್ನು ಪಡೆದು ಗ್ರಾಮಸ್ಥರು ಸಶಕ್ತರಾಗಬೇಕು ಎಂದರು.
ಸ್ವಾತಂತ್ರ್ಯ ನಂತರದಲ್ಲಿ ದೇಶವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅನೇಕ ಬದಲಾವಣೆಗಳನ್ನು ಕಂಡಿದೆ. ದಶಕಗಳ ಹಿಂದೆ ಹೆರಿಗೆ ಸಮಯದಲ್ಲಿ ತಾಯಿ ಅಥವಾ ಮಗು ಸಾವನ್ನಪ್ಪುವ ಘಟನೆಗಳು ನಡೆಯುತ್ತಿದ್ದವು, ಆದರೆ ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ಅನೇಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆರಿಗೆ ಸಮಯದಲ್ಲಿ ಸಾವಿನ ಘಟನೆಗಳು ನಡೆಯದಂತಹ ದಿನಗಳನ್ನು ನಾವು ಕಾಣುತ್ತಿದ್ದೇವೆ. ಒಂದು ವೇಳೆ ಸಾವು ಸಂಭವಿಸಿದರೆ ಖುದ್ದಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ ಎಂದರು.

ಜನಸಂಖ್ಯೆ ಜಾಸ್ತಿಯಾದಂತೆ ಕೃಷಿ ಭೂಮಿಗಳು ಕಿರಿದಾಗುತ್ತಿವೆ, ಆದರೂ ಆಹಾರ ಧಾನ್ಯಗಳ ಪೂರೈಕೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ, ಎಲ್ಲರೂ ಬುದ್ದಿಮತ್ತೆ, ಕೌಶಲ್ಯ ರೂಢಿಸಿಕೊಂಡರೆ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇದೊಂದು ವಿಶಿಷ್ಟವಾದ ಕಾರ್ಯಕ್ರಮ ವಾಗಿದ್ದು, ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಎಲ್ಲಾ ಮೂಲಭೂತ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ನಿಮ್ಮ ಗ್ರಾಮದ ಮನೆ ಬಾಗಿಲ ಮುಂದೆ ಬಂದು ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡುವಂತಹ ಯೋಜನೆಯಾಗಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಕೆ.ಎಸ್ ಮಾತನಾಡಿ, ಮೊದಲೇಲ್ಲಾ ಕೆಲ ಜನಸಾಮಾನ್ಯರು ಒಂದು ಕೆಲಸಕ್ಕೆ ಅರ್ಜಿ ಹಾಕಿದ್ರೆ ತಿಂಗಳುಗಟ್ಟಲೆ ಅಲೆದಾಡುವ ಪರಿಸ್ಥಿತಿ ಇತ್ತು, ಈಗ ಸರ್ಕಾರದ ಹೊಸ ಯೋಜನೆ ಜಿಲ್ಲಾಡಳಿತ ನಡೆ ಹಳ್ಳಿಯ ಕಡೆ ಈ ವಿನೂತನ ಕಾರ್ಯಕ್ರಮದ ಮೂಲಕ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಮನೆಯ ಬಾಗಿಲಿಗೆ ಬಂದು ಸಮಸ್ಯೆಗಳನ್ನುಆಲಿಸಿ ಪರಿಹರಿಸಲಿದ್ದಾರೆ. ಹಳೆ ಬುಳ್ಳಾಪುರ ಸೇರಿದಂತೆ ಆನಗೋಡು ಹೋಬಳಿಯ ವ್ಯಾಪ್ತಿಯ ಪ್ರದೇಶದಲ್ಲಿ ಮೆಕ್ಕೆಜೋಳ ಅತಿ ಹೆಚ್ಚಾಗಿ ಬೆಳೆಯುವದರಿಂದ ಈ ಬಾರಿ ಮಳೆ ಜಾಸ್ತಿಯಾಗಿ ಬೆಳೆಗಳು ಹಾನಿ ಆಗಿವೆ ಕೃಷಿ ಇಲಾಖೆ ಜೊತೆ ಮಾತನಾಡಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಿ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಕರಿಬಸಪ್ಪ ಮಾತನಾಡಿ, ಈ ಊರಿನಲ್ಲಿ ಸಾಮಾನ್ಯ ವರ್ಗ ಹಾಗೂ ಎಸ್ಸಿ ಎಸ್ಟಿ ಜನರು ವಾಸಿಸುತ್ತಿದ್ದು ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಗ್ರಾಮವಾಗಿದೆ. ರಸ್ತೆ, ಚರಂಡಿ, ಹಾಗೂ ಶಾಲಾ ಕೊಠಡಿಗಳು ಹಾಳಾಗಿ ವಿದ್ಯಾಭ್ಯಾಸಕ್ಕೆ ಅಡ್ಡಿ ಉಂಟಾಗುತ್ತಿದ್ದು ಕೊಠಡಿಗಳ ಸಮಸ್ಯೆ ಪರಿಹರಿಸಬೇಕು. ಗ್ರಾಮದಲ್ಲಿ ಅತಿ ಹೆಚ್ಚು ಬಡ ಮಕ್ಕಳು ಇದ್ದು ಖಾಸಗಿ ಶಾಲೆಗೆ ಹೋಗದೆ ಸರ್ಕಾರಿ ಶಾಲೆಯನ್ನೆ ಅವಲಂಬಿಸಿದ್ದಾರೆ. ಊರಿಗೆ ಪ್ರತ್ಯೇಕ ಸ್ಮಶಾನ ಇಲ್ಲ ಇರುವ ಜಾಗವನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ತೆರವುಗೋಳಿಸಿ ಶವ ಸಂಸ್ಕಾರಕ್ಕೆ ಅನುಮತಿ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಿಂದ ಮನೆ ಮಂಜೂರಾತಿ ಪತ್ರ ಹಾಗೂ ವಿವಿಧ ಸೌಲಭ್ಯಗಳ ಪತ್ರವನ್ನು ನೀಡಿದ್ದು ಗ್ರಾಮದಲ್ಲಿ ಸ್ವಚ್ಛತೆ, ಸಿಸಿ ರೋಡ್, ಚರಂಡಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾಮದ ಶಾಲೆಗೆ ಐದು ಲಕ್ಷ ಅಂದಾಜು ಮೊತ್ತದ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಬಸವನಗೌಡ ಕೊಟೂರ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಪಿಂಚಣಿ, ಬೆಳೆ ಪರಿಹಾರ, ಆಧಾರ್ ಕಾರ್ಡ್, ಬೀಜ ಮತ್ತು ಗೊಬ್ಬರ ವಿತರಣೆಯಂತಹ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು. ಹಿಂದೆ ವಿಧವೆಯರು, ವೃದ್ಧರು, ಅಂಗವಿಕಲರು ಪಿಂಚಣಿ ಪಡೆಯಲು ಅಲೆದಾಡಬೇಕಿತ್ತು ಆದರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅರ್ಹರೆಲ್ಲಗೂ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಸೀಮಂತ ಹಾಗೂ ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ವಿಕಲಚೇತನರ ಕಲ್ಯಾಣ ಇಲಾಖೆ ವತಿಯಿಂದ ಎರಡು ಜನರಿಗೆ ಸಾಂಕೇತಿಕವಾಗಿ ಶ್ರವಣ ಸಾಧನವನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮಸ್ಥರು ಪೂರ್ಣ ಕುಂಭ ಸ್ವಾಗತ ಹಾಗೂ ವಿವಿಧ ವಾದ್ಯಗೋಷ್ಠಿಯೊಂದಿಗೆ ಅಧಿಕಾರಿಗಳನ್ನು ಸ್ವಾಗತಿಸಿದರು. ನಂತರ ಜಿಲ್ಲಾಧಿಕಾರಿಗಳು ಗ್ರಾಮದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸುರೇಶ್, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top