ದಾವಣಗೆರೆ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರುವ ಬೆಡ್‍ಗಳು, ವೆಂಟಿಲೇಟರ್, ಐಸಿಯು ಹಾಗೂ ಖಾಲಿ ಇರುವ ಬೆಡ್‍ಗಳ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೋವಿಡ್ ಸೋಂಕಿತರು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಎಡತಾಕುತ್ತಿದ್ದು, ಅಲ್ಲಿ ಲಭ್ಯವಿರುವ ಬೆಡ್‍ಗಳ ವಿವರದ ಮಾಹಿತಿ ಸಮರ್ಪಕವಾಗಿ ದೊರೆಯದೆ, ಅಥವಾ ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಹಿತಿ ಪಡೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ರೋಗಿಗಳು ಅಲೆದಾಡುತ್ತಿದ್ದಾರೆ, ಆಸ್ಪತ್ರೆಗಳ ಪರಿಚಾರಕರು, ಗ್ರೂಪ್-ಡಿ ಸಿಬ್ಬಂದಿಗಳು, ಕಾವಲುಗಾರರೇ ಸಾರ್ವಜನಿಕರಿಗೆ ಇಲ್ಲಿ ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ಸಾಗಹಾಕುತ್ತಿದ್ದಾರೆ, ಆಂಬುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರು, ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ಭರ್ತಿಯಾಗಿರುವ ಹಾಗೂ ಖಾಲಿ ಇರುವ ಬೆಡ್‍ಗಳ ವಿವರ ನಿಖರವಾಗಿ ಸಮಪರ್ಕವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಲು, ಸರ್ಕಾರಿ ಹಾಗೂ ಎಲ್ಲ ಖಾಸಗಿ ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು. ಆಸ್ಪತ್ರೆವಾರು ಬೆಡ್‍ಗಳ ಭರ್ತಿ ಹಾಗೂ ಲಭ್ಯತೆ ಕುರಿತ ವಿವರವುಳ್ಳ ಬುಲೆಟಿನ್ ಅನ್ನು ನಿತ್ಯ ಜಿಲ್ಲಾಧಿಕಾರಿಗಳು ಪ್ರಕಟಿಸಬೇಕು.
ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಹಾಗೂ ರೆಮ್‍ಡೆಸಿವರ್ ಔಷಧ ಸಮರ್ಪಕ ಪೂರೈಕೆ ಹಾಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.



