ದಾವಣಗೆರೆ: ಜಿಲ್ಲೆಯ ರಫ್ತು ಉದ್ದಿಮೆದಾರರ ಕುಂದು ಕೊರತೆಗಳನ್ನು ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯನ್ನು ರಚಿಸಲಾಗಿದ್ದು, ಇನ್ನು ಮುಂದೆ ನಿಯಮಿತವಾಗಿ ಸಭೆ ಕರೆದು ರಫ್ತುದಾರರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿಗೆ ಅವಶ್ಯವಾದ ಸದಸ್ಯರನ್ನು ನೇಮಿಸಿ ಮಾತನಾಡಿ, ಜಿಲ್ಲೆಯನ್ನು ರಫ್ತು ಹಬ್ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಆದ ಜಿ.ವಿ.ಪಾಟಿಲ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ರಫ್ತು ಉತ್ತೇಜನಾ ಸಮಿತಿಯನ್ನು ರಚಿಸಲಾಗಿದ್ದು, ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮ ಅನುಷ್ಟಾನಗೊಳಿಸಲು ಜಿಲ್ಲೆಯಲ್ಲಿ ಆಗ್ರ್ಯಾನಿಕ್ ಮಿಲೆಟ್ಸ್(ನವಣೆ, ಸಜ್ಜೆ, ಸಾವೆ, ರಾಗಿ) ಹಾಗೂ ಮೆಕ್ಕೆಜೋಳ ಮತ್ತು ಉಪಉತ್ಪನ್ನಗಳನ್ನು ಗುರುತಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಇರುವ ಅರೆಕಾನಟ್ ವ್ಯಾಲ್ಯು ಆಡೆಡ್ ಪ್ರೋಡಕ್ಟ್ಸ್, ಷುಗರ್ಸ್, ಮಾರಿಗೋಲ್ಡ್ ಫ್ಲವರ್ ಎಕ್ಸ್‍ಟ್ರಾಕ್ಟ್, ಗರ್ಕಿನ್ಸ್, ಫೌಂಡ್ರಿ ಇತರೆ ರಫ್ತು ವಸ್ತುಗಳಿಗೂ ಸಹ ಉತ್ತೇಜನ ನೀಡಲಾಗಿದೆ.
ಎಕ್ಸ್‍ಪೋರ್ಟ್ ಹಬ್‍ಗೆ ಕ್ರಿಯಾ ಯೋಜನೆ : ‘ಡಿಸ್ಟ್ರಿಕ್ಟ್ ಆಸ್ ಎ ಎಕ್ಸ್‍ಪೋರ್ಟ್ ಹಬ್’ ಎಂಬ ಕಾರ್ಯಕ್ರಮ ಅನುಷ್ಟಾನಗೊಳಿಸಲು ಜಿಲ್ಲೆಯಲ್ಲಿ ಮೆಕ್ಕೆಜೋಳ, ಆಗ್ರ್ಯಾನಿಕ್ ಮಿಲೆಟ್ ಸೇರಿದಂತೆ ಏಳು ಉತ್ಪನ್ನಗಳನ್ನು ಗುರುತಿಸಿದ್ದು, ಇವುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಹಾಗೂ ಉತ್ಪನ್ನಗಳ ಸಪ್ಲೈ ಚೈನ್ ಬಗ್ಗೆ ಮಾಹಿತಿ ಸಂಗ್ರಿಹಿಸಿ ಜಿಲ್ಲಾ ಕ್ರಿಯಾ ಯೋಜನೆ ತಯಾರಿಸಬೇಕು. ಜಿಲ್ಲೆಯಲ್ಲಿ ಎಷ್ಟು ರಫ್ತುದಾರರು ತಮ್ಮ ಉತ್ಪನ್ನಗಳನ್ನು ಯಾವ ದೇಶಗಳಿಗೆ ಎಷ್ಟು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎಂಬ ಮಾಹಿತಿ ಸೇರಿಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಡಿಸೆಂಬರ್ ಒಳಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಅಲ್ಲದೇ ಜಿಲ್ಲೆಯ ಉತ್ಪನ್ನಗಳಿಗೆ ಅವಶ್ಯಕವಾದ ಪರೀಕ್ಷಾ ಕೇಂದ್ರಗಳು, ಲಾಜಿಸ್ಟಿಕ್ಸ್ ಇತರೆ ವ್ಯವಸ್ಥೆ ಬಗ್ಗೆ ಸಹ ಉದ್ದಿಮೆದಾರರಿಂದ ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ತಿಳಿಸಿದರು.
ಗ್ರೀನ್ ಅಗ್ರೋ ಪ್ಯಾಕ್ ಪ್ರೈ.ಲಿ ನ ಮಾಲೀಕರಾದ ಕರಿಬಸಪ್ಪ ಮಾತನಾಡಿ, ಯೂರೋಪ್ ಮತ್ತು ಇತರೆ ದೇಶಗಳಿಗೆ ಮಿಡಿಸೌತೆ ಮತ್ತು ಇತರೆ ತರಕಾರಿಗಳನ್ನು ರಫ್ತು ಮಾಡಲಾಗುತ್ತಿದ್ದು, 15 ಬ್ರಾಂಚ್ ಹೊಂದಲಾಗಿದೆ. ರೈತರಿಗೆ ಅನುಕೂಲ ಮಾಡುವುದು ಅಗತ್ಯವಾಗಿದ್ದು ಸ್ಟೋರೇಜ್‍ಗಾಗಿ ಕೊಗ್ಗನೂರಿನಲ್ಲಿ ಒಂದು ಸ್ಟೋರೇಜ್ ಯುನಿಟ್ ಸ್ಥಾಪಿಸಲಾಗಿದೆ ಎಂದರು.
ಕೋವಿಡ್ ಹಿನ್ನೆಲೆಯ ಕಾರಣ ಹೇಳಿ ಶಿಪ್ಪಿಂಗ್ ದರವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ಇದರಿಂದ ರಫ್ತುದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ದರ ಇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಹಕರಿಸಬೇಕೆಂದು ಮನವಿ ಮಾಡಿದರು.
ಇಂಡಸ್ ವೆಜ್ ಪ್ರೊ ಪ್ರೈ.ಲಿ ನ ಗಿರೀಶ್ ಮಾತನಾಡಿ, ಮಿಡಿಸೌತೆ ಮತ್ತು ತರಕಾರಿಗಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತಿದ್ದು ಇದರೊಂದಿಗೆ ವ್ಯಾಲ್ಯು ಆಡೆಡ್ ಉತ್ಪನ್ನಗಳನ್ನು ಸಹ ರಫ್ತು ಮಾಡುತ್ತೇವೆ. ಕೆಲವು ತರಕಾರಿಗಳನ್ನು ಹೊರದೇಶದಿಂದ ಆಮದು ಮಾಡಿಕೊಂಡು ಅವುಗಳಿಗೆ ಇತರೆ ತರಕಾರಿಯನ್ನು ಸ್ಟಫ್ ಮಾಡಿ ಹೊರದೇಶಗಳಿಗೆ ರಫ್ತು ಕೂಡ ಮಾಡುತ್ತೇವೆ.
ಕೋವಿಡ್ ಹಿನ್ನೆಲೆಯಲ್ಲಿ ಶಿಪ್ಪಿಂಗ್ ದರ ಹೆಚ್ಚಿರುವುದು ಒಂದು ತೊಂದರೆಯಾದರೆ, ಶಿಪ್ಪಿಂಗ್ ಕಂಪೆನಿಯವರ ನೀತಿಯಿಂದಾಗಿ ಕಂಟೈನರ್‍ಗಳು ಸಿಗುವುದೇ ಕಷ್ಟವಾಗಿದೆ. ಒಂದು ತಿಂಗಳ ಮೊದಲೇ ಕಂಟೈನರ್‍ಗಳಿಗಾಗಿ ಬುಕಿಂಗ್ ಮಾಡಬೇಕು. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದರು.
ಮೆ:ವೆಲ್ಕಸ್ತ ಫೌಂಡ್ರಿಯ ಮಾಲೀಕ ಸತ್ಯನಾರಾಯಣ ಮಾತನಾಡಿ, ಜಿಎಸ್‍ಟಿ ಫೈಲ್ ಮಾಡಿದ ನಂತರ ತಮಗೆ ವಾಪಾಸ್ಸಾಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
ಉದ್ದಿಮೆದಾರ ಪ್ರಕಾಶ್ ಮಾತನಾಡಿ, ತಾವು ಎಲೆಬೇತೂರಿನಲ್ಲಿ ಪ್ಲೈವುಡ್, ಫರ್ನಿಚರ್ ಉದ್ದಿಮೆ ಮಾಡುತ್ತಿದ್ದು ತಮ್ಮ ಉತ್ಪನ್ನಕ್ಕೆ ಸ್ಥಳೀಯವಾಗಿಯೂ ಉತ್ತಮ ಬೇಡಿಕೆ ಇದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಕಾಯರ್ ಫೆಡರೇಷನ್ ಆಗಿದ್ದು, ಕಾಯರ್ ಉತ್ಪನ್ನಗಳನ್ನು ರಫ್ತು ಮಾಡಲು ಯೋಜಿಸಲಾಗಿದೆ. ಇದೀಗ ಆನ್‍ಲೈನ್ ಮಾರ್ಕೆಟಿಂಗ್ ಪ್ರಾರಂಭಿಸಲಾಗಿದೆ ಎಂದರು.
ಮಿಲ್ಲೆಟ್ ಸಂಸ್ಕರಣಾ ಘಟಕದ ಕೃಪಾ ಮಾತನಾಡಿ, ತಾವು ಸಿರಿಧಾನ್ಯ (ಮಿಲೆಟ್)ಸಂಸ್ಕರಣಾ ಘಟಕವನ್ನು ನಡೆಸುತ್ತಿದ್ದೇವೆ ಎಂದರು. ಅಲ್-ಅರ್ಹಾನ್ ಮೈಜ್‍ಗ್ರಿಟ್‍ನ ಮಾಲೀಕರು ಮಾತನಾಡಿ ರಫ್ತು ಉದ್ದಿಮೆದಾರರಿಗೆ ಬ್ಯಾಂಕಿನಿಂದ ವರ್ಕಿಂಗ್ ಕ್ಯಾಪಿಟಲ್‍ನ ತುಂಬಾ ಅವಶ್ಯಕತೆ ಇದೆ ಎಂದರು.
ಮೆಕ್ಕೆಜೋಳ ಉದ್ದಿಮೆದಾರ ಬಸವರಾಜಪ್ಪ ತುರ್ಚಘಟ್ಟ ಇವರು ಮಾತನಾಡಿ, ತಾವು ಕೃಷಿಕರಾಗಿದ್ದು ಇದೀಗ ಮೆಕ್ಕೆಜೋಳವನ್ನು ಇತರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಉದ್ದಿಮೆದಾರನಾಗಿದ್ದೇನೆ. ನನ್ನಂತೆ ಅನೇಕ ಮೆಕ್ಕೆಜೋಳ ಬೆಳೆಯುವ ರೈತರು ರಫ್ತು ಉದ್ದಿಮೆಯಲ್ಲಿ ತೊಡಗಿದ್ದು, ಜಪಾನ್, ಸಿಂಗಪೂರ್, ಮಲೇಶಿಯಾ ಇತರೆ ದೇಶಗಳಲ್ಲಿ ಮೆಕ್ಕೆಜೋಳದ ಬೇಡಿಕೆ ಹೆಚ್ಚಿದೆ. ರೈತರಾದ ನಮಗೆ ಸಂಪನ್ಮೂಲ ಮುಖ್ಯವಾಗಿದ್ದು, ನಮ್ಮ ಪ್ರಾಜೆಕ್ಟ್ ಪ್ರಕಾರ ಬ್ಯಾಂಕಿನಿಂದ ಸಾಲ ಸಿಗುತ್ತಿಲ್ಲ. ವರ್ಕಿಂಗ್ ಕ್ಯಾಪಿಟಲ್ ನಮಗೆ ಬಹಳ ಪ್ರಮುಖ ಅದನ್ನೇ ನೀಡುತ್ತಿಲ್ಲ. ಹಾಗೂ ಸಾಲ ನೀಡುವುದು ತೀರ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಏಳು ಮೆಕ್ಕೆಜೋಳ ಘಟಕ ಸ್ಥಾಪಿಸಿದ್ದು ಈ ಪೈಕಿ ಐದು ಕಾರ್ಯ ನಿರ್ವಹಿಸುತ್ತಿವೆ. ಸಕ್ರಿಯವಾಗಿರುವ ಘಟಕಗಳಿಗಾದರೂ ಶೀಘ್ರವಾಗಿ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಮಾಡುವಂತೆ ಕೋರಿದರು.
ಮೆಕ್ಕೆಜೋಳದ ತೇವಾಂಶ ಪರೀಕ್ಷಿಸಲು ಜಿಲ್ಲೆಯಲ್ಲಿ ಒಂದು ಪರೀಕ್ಷಾ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಎಂದರು. ಮತ್ತೋರ್ವ ರಫ್ತುದಾರರು ಬ್ಯಾಂಕ್‍ನಲ್ಲಿ ವರ್ಕಿಂಗ್ ಕ್ಯಾಪಿಟಲ್ ಮಂಜೂರಾದರೂ ಬಿಡುಗಡೆ ಆಗಿಲ್ಲ. ಆದರೆ ಮರುಪಾವತಿ ಕೇಳುತ್ತಿದ್ದಾರೆಂದು ದೂರಿದರು.
ಮತ್ತೋರ್ವ ಮೆಕ್ಕೆಜೋಳ ರಫ್ತುದಾರರು, ಕೃಷಿಕ ಹಿನ್ನೆಲೆ ಹೊಂದಿರುವ ತಮಗೆ ರಫ್ತು ವಹಿವಾಟು ಕುರಿತಾದ ಮಾಹಿತಿಗಳನ್ನು ನೀಡಲು ಒಂದು ಪ್ರತ್ಯೇಕ ಕಚೇರಿ ಮತ್ತು ತರಬೇತಿ ಅವಶ್ಯಕತೆ ಇದೆ ಎಂದರು.
ನಬಾರ್ಡ್ ಬ್ಯಾಂಕಿನ ಡಿಡಿಎಂ ರವೀಂದ್ರ ಮಾತನಾಡಿ, ನಬಾರ್ಡ್ ಬ್ಯಾಂಕಿನಿಂದ ಇದುವರೆಗೆ ಸ್ಟೋರೇಜ್‍ಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿತ್ತು. ವರ್ಕಿಂಗ್ ಕ್ಯಾಪಿಟಲ್ ನೀಡುವ ಪ್ರಸ್ತಾಪ ಹೊಸದಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಕೃಷಿ ಆಧಾರಿಕ ಉತ್ಪನ್ನಗಳಿಗೆ ವರ್ಕಿಂಗ್ ಕ್ಯಾಪಿಟಲ್ ಬಹಳ ಮುಖ್ಯವಾಗಿದ್ದು ಲೀಡ್ ಬ್ಯಾಂಕ್ ಮ್ಯಾನೇಜರ್‍ರವರು ಸಾಲ ವಿಳಂಬ ಸೇರಿದಂತೆ ಇತರೆ ಸಮಸ್ಯೆ ಕುರಿತು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ ಶಾಸ್ತ್ರಿ ಮಾತನಾಡಿ, ಪ್ರಾಜೆಕ್ಟ್ ವಿಳಂಬ ಪ್ರಕರಣಗಳಿವೆ. ಹಾಗೂ ವರ್ಕಿಂಗ್ ಕ್ಯಾಪಿಟಲ್‍ನ್ನು ಪ್ರಾದೇಶಿಕ ಕಚೇರಿಯವರು ನೀಡಬೇಕು. ಈ ಬಗ್ಗೆ ನಾನು ಪ್ರಕರಣವಾರು ತಿಳಿದುಕೊಂಡು ಕ್ರಮ ವಹಿಸುತ್ತೇನೆ ಎಂದರು.
ರಫ್ತುದಾರರಿಗೆ ಅವಶ್ಯಕವಾದ ಮಾಹಿತಿ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರತ್ಯೇಕ ಕಚೇರಿ ತೆರೆಯಲು ಕ್ರಮ ವಹಿಸಲಾಗುವುದು ಹಾಗೂ ರಫ್ತುದಾರರಿಗೆ ರಫ್ತಿನ ವಹಿವಾಟು ಕುರಿತು ತರಬೇತಿ ನೀಡಲಾಗುವುದು ಎಂದು ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ, ಉಪ ನಿರ್ದೇಶಕ ಮಂಜುನಾಥ್, ಗ್ರಾಮಾಂತರ ಕೈಗಾರಿಕಾ ವಿಭಾಗದ ಪ್ರಭಾರ ಉಪನಿರ್ದೇಶಕ ಮನ್ಸೂರ್, ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್. ಕೈಗಾರಿಕಾ ವಿಸ್ತರಣಾಧಿಕಾರಿ ಶ್ರೀಕಾಂತ ಎಸ್.ಎಸ್, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಎನ್.ಸಿ.ಹನುಮಂತರಾವ್, ಝಡ್.ಕೆ.ಗಾರ್ಮೆಂಟ್ಸ್‍ನ ಡಿ.ಶೇಷಾಚಲ, ರಫ್ತು ಉದ್ದಿಮೆದಾರರಾದ ಸಂದೀಪ್, ಮಹಾದೇವಯ್ಯ, ನಾಗರಾಜಪ್ಪ, ಪ್ರದೀಪ್ ಇತರರು ಇದ್ದರು.