ದಾವಣಗೆರೆ: ಸರ್ಕಾರಿ ನೌಕರಿ ಇದ್ದವರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇಂತಹ ಪ್ರಕರಣಗಳ ಪರಿಶೀಲನೆಗೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಈಗಾಗಲೇ ಎಲ್ಲ ಇಲಾಖೆಗೆ ಸರ್ಕಾರಿ ನೌಕರ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರೂ, ಮಾಹಿತಿ ಒದಗಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸಮನ್ವಯ ಸಮಿತಿ ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರು ಆಧಾರ್ ಮತ್ತು ಮೊಲೈನ್ ಸಂಖ್ಯೆ ನೀಡುವುದು ಕಡ್ಡಾಯ ಎಂದು ಸೂಚಿಸಿದರು.
ಮಾ.20 ಗ್ರಾಮ ವಾಸ್ತವ್ಯ : ಮಾ.20 ರ ಶನಿವಾರದಂದು ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದು, ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಆದೇಶಿಸಲಾಗಿದೆ.
ಮಾ.24 ಕನಸು ಬಿತ್ತುವ, ರಾಷ್ಟ್ರ ಕಟ್ಟುವ ಕಾರ್ಯಕ್ರಮ : ಕಳೆದ ವರ್ಷ “ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ” ಎಂಬ ಯೋಜನೆಗೆ ಚಾಲನೆ ನೀಡಿದ್ದು, ಕೊರೋನ ಸೋಂಕಿನ ಕಾರಣದಿಂದಾಗಿ ಮುಂದುವರೆಸಲು ಆಗಿರಲಿಲ್ಲ. ಇದೀಗ ಮಾ.24 ರಂದು ನ್ಯಾಮತಿ ತಾಲ್ಲೂಕಿನ ಮಲ್ಲಿಗೆ ಗ್ರಾಮದಲ್ಲಿ ಸುಮಾರು 4-5 ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.



