ದಾವಣಗೆರೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನರ ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆಯಾಗಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನರ ಮನೆಯ ಬಾಗಿಲಿಗೆ ಬಂದು ತಲುಪಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಶನಿವಾರ ಹರಿಹರ ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಸಿಡುಬು ರೋಗಗಳಂತಹ ಅನೇಕ ಸಾಂಕ್ರಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದರು. ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಡೆದು ಉತ್ತಮ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಹೀಗೆ ಎಲ್ಲಾ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ದೇಶದಲ್ಲಿ ಜನಸಾಮಾನ್ಯರ ಜೀವನಶೈಲಿ ಬಹಳಷ್ಟು ಸುಧಾರಣೆಯಾಗಿದೆ.
ಕೋವಿಡ್-19 ಲಸಿಕೆ ಹಾಗೂ ಇನ್ನೀತರ ವೈದ್ಯಕೀಯ ಸಲಕರಣೆಗಳನ್ನು ಬೇರೆ ದೇಶಕ್ಕೆ ರಪ್ತು ಮಾಡುವ ಹಂತಕ್ಕೆ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ.
75 ವರ್ಷಗಳ ಹಿಂದೆ ಕೇವಲ 10% ಜನರಿಗೆ ಮಾತ್ರ ಓದು ಬರಹ ಬರುತ್ತಿತ್ತು, ಆ ಸಂದರ್ಭದಲ್ಲಿ ಪತ್ರ ಓದಲು ಬೇರೆಯವರ ಮನೆಗೆ ಹೋಗುವ ಪರಿಸ್ಥಿತಿ ಇತ್ತು, ಪ್ರಸ್ತುತ ಉತ್ತಮ ಶಿಕ್ಷಣ ಪಡೆಯುವ ಮೂಲಕ ಎಲ್ಲರೂ ವಿದ್ಯಾವಂತರಾಗುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂದರು.
ಹರಿಹರ ತಹಶೀಲ್ದಾರ್ ಅಶ್ವತ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ವಿಧವೆಯರು, ವೃದ್ಧರು, ಅಂಗವಿಕಲರಿಗೆ ಪಿಂಚಣಿ, ಆಧಾರ್ ಕಾರ್ಡ್‍ನಂತಹ ಅನೇಕ ಸೌಲಭ್ಯಗಳನ್ನು ಅರ್ಹರೆಲ್ಲಗೂ ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದರು.
ಗ್ರಾಮದ ಮುಖಂಡ ಶಂಭುಲಿಂಗ ಮಾತನಾಡಿ, ರಾಮತೀರ್ಥ ಹಾಗೂ ಬೆಳ್ಳೂಡಿ ಮಾರ್ಗವಾಗಿ ಹೊಗುವ ರಸ್ತೆಯಲ್ಲಿನ ಸೇತುವೆ ಹಾಳಾಗಿದ್ದು ಈ ಗ್ರಾಮದ ಮಕ್ಕಳು ಶಾಲೆಗೆ ಹೊಗುವುದಕ್ಕೆ ತೊಂದರೆಯಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ಇನ್ನು ಹೆಚ್ಚಿನ ಕೊಠಡಿಗಳನ್ನು ಮಂಜೂರು ಮಾಡಬೇಕು ಮತ್ತು ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಅಂಗನವಾಡಿಯು ಮಳೆಯಗಾಲದಲ್ಲಿ ಸೋರುತ್ತಿದ್ದು, ಪುನರ್ ನಿರ್ಮಾಣ ಮಾಡಬೇಕು, ಗ್ರಾಮಕ್ಕೆ ಸಿ.ಸಿ ರಸ್ತೆ, ಬಾಕ್ಸ್ ಚರಂಡಿ, ಬಸ್ಸು ಸೌಲಭ್ಯ, ಹೊಲಗಳಿಗೆ ಹೋಗುವ ರಸ್ತೆಗಳ ದುರಸ್ಥಿ, ಪಶು ಆಸ್ಪತ್ರೆ, ಅಂಚೆ ಕಚೇರಿ ಸೇರಿದಂತೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬೇಡಿಕೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಲೋಕೇಶ್ ಹಾಗೂ ನಾಗೇನಹಳ್ಳಿ ಬೀರೇಶ್ ಮಾತನಾಡಿದರು.
ಇದೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ನೆರವೇರಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ವಾದ್ಯಗೋಷ್ಠಿಯೊಂದಿಗೆ ಅಧಿಕಾರಿಗಳನ್ನು ಸ್ವಾಗತಿಸಿದರು. ನಂತರ ಜಿಲ್ಲಾಧಿಕಾರಿಗಳು ರಾಮತೀರ್ಥ ಹಾಗೂ ಬೆಳ್ಳೂಡಿ ಗ್ರಾಮದ ನಡುವಿನ ಹಾನಿಯಾದ ಸಂಪರ್ಕ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿಡಿಪಿಐ ತಿಪ್ಪೇಶಪ್ಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ಗ್ರಾ.ಪಂ ಉಪಾಧ್ಯಕ್ಷರಾದ ದ್ರಾಕ್ಷಯಣಮ್ಮ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.