ದಾವಣಗೆರೆ: ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಮೂಲಕ ಸಮಸ್ಯೆಗಳ ಕುರಿತು ಸಂವಾದ ನಡೆಸಿ ಸ್ಥಳದಲ್ಲಿಯೇ ಪರಿಹಾರದೊರಕಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ತಾವರೆಕೆರೆ (ತಾವರೆಕೆರೆ, ನೆಲ್ಲಿಹಂಕಲು, ದುರ್ವಿಗೆರೆ, ಮರವಂಜಿ ಗ್ರಾಮ ಪಂಚಾಯಿತಿಗಳ) ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಸೂಕ್ತ ಪರಿಹಾರ ಒದಗಿಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುವುದು. ಕಂದಾಯ ಇಲಾಖೆ ವ್ಯಾಪ್ತಿಯ ಪಹಣಿ, ಪೌತಿ ಖಾತೆ ಸೇರಿದಂತೆ ಪಿಂಚಣಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲಾಗುವುದು ಎಂದರು.
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ, ಸ್ವಾತಂತ್ರ್ಯ ನಂತರದಲ್ಲಿ ದೇಶ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ಆಹಾರಕ್ಕಾಗಿ ಆಹಾಕಾರ ಇತ್ತು, ಆದರೆ ಪ್ರಸ್ತುತ ದಿನಮಾನಗಳಲ್ಲಿ ಅನೇಕ ಆಹಾರ ಪದಾರ್ಥಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದ್ದು, ಆಹಾರ ಸಂಪನ್ಮೂಲಗಳನ್ನು ವಿದೇಶಕ್ಕೆ ರಫ್ತು ಮಾಡುವ ಮಟ್ಟಕ್ಕೆ ದೇಶ ಅಭಿವೃದ್ಧಿ ಹೊಂದಿದೆ. ವಿಶೇಷವಾಗಿ ಚನ್ನಗಿರಿ ತಾಲ್ಲೂಕು ಅಡಿಕೆ ಬೆಳೆ ಬೆಳೆಯಲು ಹೆಸರುವಾಸಿಯಾಗಿದ್ದು, ಅತಿವೃಷ್ಟಿಯಿಂದ ಹಾನಿಗಿಡಾದ ಅಡಿಕೆ ಸೇರಿದಂತೆ ಇನ್ನಿತರ ಎಲ್ಲಾ ಬೆಳೆಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ಒದಗಿಸಲಾಗುವುದು ಎಂದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷರು ಮತ್ತು ನಿರ್ದೇಶಕ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಬಳಿಯೇ ಬಂದು ಸಮಸ್ಯೆ ಆಲಿಸಿ ಪರಿಹರಿಸುವ ಒಂದು ವಿನೂತನ ಯೋಜನೆಯಾಗಿದ್ದು, ತಾವರೆಕೆರೆ, ನೆಲ್ಲಿಹಂಕಲು, ದುರ್ವಿಗೆರೆ, ಮರವಂಜಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಒಟ್ಟು ‘ಒಂದು ಸಾವಿರ’ ಜನ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುವುದು. ನರೇಗಾ ಯೋಜನೆಯಡಿ 4 ಪಂಚಾಯಿತಿಗಳ ವ್ಯಾಪ್ತಿಯ 367 ಜನ ರೈತರಿಗೆ 2.23 ಕೋಟಿ ಅನುದಾನದಲ್ಲಿ ತೋಟಗಾರಿಕಾ ಬೆಳೆಗೆ ಪ್ರೋತ್ಸಾಹ ನೀಡಿ ಸಹಾಯ ಧನ ಒದಗಿಸಲಾಗಿದೆ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರದ ಸೌಲಭ್ಯ ದೊರಕಿಸಬೇಕು ಎಂಬ ಗುರಿ ಹೊಂದಲಾಗಿದೆ, ಪ್ರಸಕ್ತ ವರ್ಷದಲ್ಲಿ 1200 ಹೆಚ್ಚುವರಿ ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದ್ದು ಅರ್ಹರು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು. ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಒಂದು ವಾರದೊಳಗೆ ಸ್ಥಳ ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ವೃದ್ದಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು. ಜನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಅರ್ಹರು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯಿತಿ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೆÇೀಷಣ್ ಅಭಿಯಾನ ಯೋಜನೆಯಡಿ 50 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು. ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾದ ಸೌಲಭ್ಯಗಳ ಆದೇಶ ಪ್ರತಿ ನೀಡಲಾಯಿತು. ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇಳೆ ಗ್ರಾಮಸ್ಥರಿಂದ ಕಂದಾಯ ಇಲಾಖೆಗೆ 43 ಹಾಗೂ ಇತರೆ ಇಲಾಖೆಗೆ ಸಂಬಂಧಿಸಿದ 22 ಕುಂದುಕೊರತೆಯ ಅರ್ಜಿಗಳು ಸ್ವೀಕೃತವಾಗಿವೆ. ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 4 (ತಾವರೆಕೆರೆ, ನೆಲ್ಲಿಹಂಕಲು, ದುರ್ವಿಗೆರೆ, ಮರವಂಜಿ ) ಪಂಚಾಯಿತಿಗಳ ವ್ಯಾಪ್ತಿಯಲ್ಲಿ 70 ಅರ್ಜಿಗಳು ಸ್ವೀಕೃತವಾಗಿವೆ.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಾವರೆಕೆರೆ ಗ್ರಾ.ಪಂ ಅಧ್ಯಕ್ಷೆ ಲತಾ ಶ್ರೀಧರ್, ನೆಲ್ಲಿಹಂಕಲು ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಹಾಲೇಶ ನಾಯ್ಕ್, ದುರ್ವಿಗೆರೆ ಗ್ರಾ.ಪಂ ಅಧ್ಯಕ್ಷೆ ಕಾವ್ಯ ಕುಮಾರ್, ಮರವಂಜಿ ಗ್ರಾ. ಪಂ ಅಧ್ಯಕ್ಷೆ ಪುಟ್ಟಮ್ಮ ಗುರುಶಾಂತಪ್ಪ ಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.