Connect with us

Dvgsuddi Kannada | online news portal | Kannada news online

ದಾವಣಗೆರೆ ವಿ.ವಿ ಘಟಿಕೋತ್ಸವ; ದೇಶದ ಏಕತೆ, ಅಖಂಡತೆಗಾಗಿ ಧರ್ಮ, ಸಂಸ್ಕೃತಿ ಸದೃಢವಾಗಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ದಾವಣಗೆರೆ

ದಾವಣಗೆರೆ ವಿ.ವಿ ಘಟಿಕೋತ್ಸವ; ದೇಶದ ಏಕತೆ, ಅಖಂಡತೆಗಾಗಿ ಧರ್ಮ, ಸಂಸ್ಕೃತಿ ಸದೃಢವಾಗಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ದಾವಣಗೆರೆ: ವಿಶ್ವಶಾಂತಿಗಾಗಿ ಇಡೀ ಜಗತ್ತೇ ಭಾರತ ದೇಶದಿಂದ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದು, ದೇಶದ ಏಕತೆ, ಅಖಂಡತೆಗಾಗಿ ನಮ್ಮಲ್ಲಿನ ಧರ್ಮ, ಸಂಸ್ಕøತಿಗಳು ಸದೃಢವಾಗಬೇಕು, ಈ ದಿಸೆಯಲ್ಲಿ ಯುವ ಪೀಳಿಗೆ ಮಹತ್ವದ ಪಾತ್ರ ವಹಿಸಬೇಕು ಎಂದು ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ದಾವಣಗೆರೆ ವಿವಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ 9ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ವಸುದೈವ ಕುಟುಂಬಕಂ’, ‘ಸರ್ವೇ ಜನ ಸುಖಿನೋಭವಂತು’ ಎನ್ನುವಂತಹ ಆಲೋಚನೆಗಳೇ ನಮ್ಮ ದೇಶದ ಸಂಸ್ಕøತಿಯಾಗಿದೆ. ವಿಶ್ವ ಶಾಂತಿಗಾಗಿ ಇಡೀ ಜಗತ್ತು ಭಾರತದಿಂದ ಹೆಚ್ಚಿನದನ್ನು ಅಪೇಕ್ಷಿತ್ತಿದೆ. ಜಗತ್ತಿನ ಅಪೇಕ್ಷೆ ಪೂರೈಸಲು ನಾವೆಲ್ಲರು ಸಹಭಾಗಿಗಳಾಗಲು ಪ್ರಯತ್ನ ಮಾಡಬೇಕು. ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ. ಪ್ರಸ್ತುತ ದೇಶದ ಜನಸಂಖ್ಯೆಯಲ್ಲಿ ಯುವಜನತೆ ಹೆಚ್ಚಿದ್ದಾರೆ, ಹೀಗಾಗಿ ಇಪ್ಪತ್ತೊಂದನೇ ಶತಮಾನ ಭಾರತ ದೇಶದ್ದು ಎಂದು ಹೇಳಲಾಗುತ್ತದೆ.

ಯುವಶಕ್ತಿಯಿಂದ ಭಾರತ ದೇಶಕ್ಕೆ ಹೆಚ್ಚಿನ ನಿರೀಕ್ಷೆಯಿದೆ. ಅನೇಕ ಸವಾಲುಗಳು ನಮ್ಮ ಮುಂದಿವೆ. ಸಮಸ್ಯೆ, ಸವಾಲುಗಳ ನಿವಾರಣೆಗೆ ಯುವ ಜನತೆ ದೇಶದೊಂದಿಗೆ ಕೈಜೋಡಿಸಬೇಕು. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು, ನಮ್ಮ ಸಂವಿಧಾನ ದೇಶದ 130 ಕೋಟಿ ಜನರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ ಕೇವಲ ಕುಟುಂಬ, ಸಮುದಾಯ, ಊರು ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ. ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆಯೂ ಕಾಳಜಿ ಬೇಕು. ದೇಶ, ಸಮಾಜದ ಬಗ್ಗೆಯೂ ಕರ್ತವ್ಯ ಪರಿಪಾಲನೆ ಆಗಬೇಕು. ಹೆಚ್ಚಿನ ಜನಸಂಖ್ಯೆಯಿಂದ ಪರಿಸರ ಹಾಳಾಗುತ್ತಿದೆ. ಭವಿಷ್ಯದಲ್ಲಿ ಇದು ದೊಡ್ಡ ಸವಾಲನ್ನು ಸೃಷ್ಟಿ ಮಾಡಲಿದೆ. ಜಲಸಂರಕ್ಷಣೆ, ಪರಿಸರ ರಕ್ಷಣೆ, ದೇಶದ ಜನಹಿತಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿಯೂ ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.

ಘಟಿಕೋತ್ಸವವು ವಿದ್ಯಾರ್ಥಿಗಳು, ಪೋಷಕರು, ಗುರುಗಳ ಪಾಲಿಗೆ ಅತ್ಯಂತ ಮಹತ್ವದ್ದು ಹಾಗೂ ಭಾವನಾತ್ಮಕವಾದ ಸಮಾರಂಭವಾಗಿದೆ. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದವರಿಂದ ಭವಿಷ್ಯದಲ್ಲಿ ದೇಶಕ್ಕೆ ಹಾಗೂ ಸಮಾಜಕ್ಕೆ ಇನ್ನಷ್ಟು ಸೇವೆ ದೊರೆಯಲಿ ಎಂದರು. ಬಂಗಾರದ ಪದಕಗಳು, ಪದವಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ ಪ್ರಸ್ತುತ ಅಧ್ಯಯನ ನಿರತ ವಿದ್ಯಾರ್ಥಿಗಳೂ ಕೂಡ, ಬಂಗಾರದ ಪದಕ ಪಡೆದಂತಹ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆಯಬೇಕು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ರಾಜ್ಯಪಾಲರು ಆಶಯ ವ್ಯಕ್ತಪಡಿಸಿದರು.

ಘಟಿಕೋತ್ಸವ ಭಾಷಣ ಮಾಡಿದ ಓರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ. ಪಿ.ವಿ. ಕೃಷ್ಣಭಟ್ , ಭಾರತದಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ನಲಂದಾ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿವಿಗಳು ವಿಶ್ವಾದ್ಯಂತ ವಿದ್ಯಾರ್ಥಿಗಳು, ವಿದ್ವಾಂಸರನ್ನು ಆಕರ್ಷಿಸಿದ್ದವು. ಬಖ್ತಿಯಾಲ್ ಖಿಲ್ಜಿ ನಲಂದಾ ವಿವಿ ಮೆಲೆ ದಾಳಿ ಮಾಡಿ ಅಲ್ಲಿನ ಪುಸ್ತಕ ಭಂಡಾರಕ್ಕೆ ಬೆಂಕಿ ಹಚ್ಚಿದಾಗ, ಆ ಬೆಂಕಿ 6 ತಿಂಗಳ ಕಾಲ ಉರಿಯುತ್ತಿತ್ತೆಂದು ವರ್ಣಿಸಲಾಗಿದೆ. ಹೀಗೆ ನಮ್ಮಲ್ಲಿದ್ದ ಅಪಾರ ಜ್ಞಾನಭಂಡಾ ಮತ್ತು ವಿವಿ ಗಳು ಪರಕೀಯ ಆಕ್ರಮಣದಿಂದ ಉಧ್ವಸ್ಥಗೊಂಡವು. ಸ್ವಾತಂತ್ರ್ಯಾನಂತರ ದೇಶದಲ್ಲಿ ರಾಷ್ಟ್ರೀಯ ಸ್ಫೂರ್ತಿ, ಚಿಂತನೆಯನ್ನು ಉತ್ತೇಜಿಸುವ, ರಾಷ್ಟ್ರೀಯ ಉದ್ದೇಶಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ಯಶಸ್ಸು ಕಂಡಿಲ್ಲ. ದೆಹಲಿಯ ಜೆ.ಎನ್.ಯು ವಿವಿಯಂತಹ ಪ್ರತಿಷ್ಠಿತ ವಿವಿಗಳ ವಿದ್ಯಾರ್ಥಿಗಳು ‘ಭಾರತ್ ತೇರೆ ಟುಕಡೇ ಹೋಂಗೆ’ ಎಂಬ ಘೋಷಣೆ ಹಾಕುವ ಮಟ್ಟಕ್ಕೆ ತಲುಪಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಘೋರ ದುರಂತವಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಸ್ವಾಗತ ಭಾಷಣ ಮಾಡಿ, ಘಟಿಕೋತ್ಸವದಲ್ಲಿ 06 ಪಿಹೆಚ್‍ಡಿ, 04 ಎಂ.ಫಿಲ್, ಪದವಿ, 9724 ಸ್ನಾತಕ ಮತ್ತು 1612 ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 44 ವಿದ್ಯಾರ್ಥಿಗಳು 79 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ವಿವಿ ಯಲ್ಲೂ ಮಾಹಿತಿ ಸಂವಹನ ತಂತ್ರಜ್ಞಾನದಡಿ ಕೆಲಸಗಳ ನಿರ್ವಹಣೆಯಾಗುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ವಚ್ಛ ಆಡಳಿತ ತರುವುದೇ ಇದರ ಉದ್ದೇಶವಾಗಿದೆ. ಈ ಘಟಕಕ್ಕಾಗಿಯೇ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದ್ದು, ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ಕೆಲಸಗಳನ್ನು ಜಾರಿಗೊಳಿಸಿರುವುದನ್ನು ಪ್ರಶಂಸಿಸಿ, ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ. ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರದಿಂದ ವಿವಿಗೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

ಗೌರವ ಡಾಕ್ಟರೇಟ್ ಪ್ರದಾನ: ಆಯರ್ವೇದ ಮತ್ತು ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಶಶಿಕುಮಾರ್ ವಿ.ಎಂ, ನಿವೃತ್ತ ಪ್ರಾಧ್ಯಾಪಕರು, ಜನಪದ ತಜ್ಞರಾದ ಡಾ. ಮೀರಾ ಸಾಬಿಹಳ್ಳಿ ಶಿವಣ್ಣ ಮತ್ತು ಇತಿಹಾಸಕಾರರಾದ ಲಕ್ಷ್ಮಣ ಎಸ್ ತೆಲಗಾವಿ ಅವರಿಗೆ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪುರಸ್ಕಾರ ಪ್ರದಾನ ಮಾಡಿದರು.

ಸ್ವಪ್ನ ಎಸ್.ಎಂ. ಗೆ 5 ಚಿನ್ನದ ಪದಕ : ದಾವಣಗೆರೆ ವಿವಿಯಲ್ಲಿ ಸ್ನಾತಕೋತ್ತರ ಆಡಳಿತ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದಲ್ಲಿ ವ್ಯಾಸಂಗ ಮಾಡಿದ ಸ್ವಪ್ನ ಎಸ್.ಎಂ. ಅವರು 05 ಚಿನ್ನದ ಪದಕಗಳನ್ನು ಬಾಚಿಕೊಂಡು ಚಿನ್ನದ ಹುಡುಗಿ ಎನಿಸಿಕೊಂಡರು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ಒಟ್ಟು 44 ಅಭ್ಯರ್ಥಿಗಳ ಪೈಕಿ ವಿದ್ಯಾರ್ಥಿನಿಯರೇ (32) ಅತಿ ಹೆಚ್ಚು ಚಿನ್ನದಪದಕ ಪಡೆದುಕೊಂಡಿದ್ದು ವಿಶೇಷವೆನಿಸಿದರೆ, 12 ವಿದ್ಯಾರ್ಥಿಗಳು ಕೂಡ ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡರು.

ಪಿಹೆಚ್‍ಡಿ ಹಾಗೂ ಎಂಫಿಲ್ ಪ್ರದಾನ : ಅರ್ಥಶಾಸ್ತ್ರ ವಿಭಾಗದಲ್ಲಿ ಗುರುಪ್ರಸಾದ್ ಎಂಎಸ್, ಮೈಕ್ರೋಬಯಾಲಜಿ ವಿಭಾಗದಲ್ಲಿ ನವೀನ ಕೆ.ಸಿ. ಹಾಗೂ ಈರಮ್ಮ ಎನ್., ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಜಾರುಬಂಡಿ ರಾಜಶೇಖರ್, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರಾಜಪ್ಪ ಎಲ್ ಮತ್ತು ಪ್ರಸನ್ನ ಎಸ್.ಹೆಚ್. ಅವರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. ಗಣಿತಶಾಸ್ತ್ರ ವಿಭಾಗದಲ್ಲಿ ರೇಖಾ ಎಂ.ಬಿ., ಜೀವಶಾಸ್ತ್ರ ವಿಭಾಗದಲ್ಲಿ ವಿರುಪಾಕ್ಷ ಟಿ.ಆರ್., ರಸಾಯನಶಾಸ್ತ್ರ ವಿಭಾಗದಲ್ಲಿ ಮಧು ಹೆಚ್, ಸಾಮಾಜಿಕ ಸೇವೆ ವಿಭಗದಲ್ಲಿ ಪಾಪಯ್ಯ ಸಿ., ಹಾಗೂ ಶಿಕ್ಷಣ ವಿಭಾಗದಲ್ಲಿ ದೀಪಕ್ ಕೆ.ಎಸ್. ಅವರಿಗೆ ಎಂ.ಫಿಲ್ ಅನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ, ಕುಲಸಚಿವರು (ಪರೀಕ್ಷಾಂಗ) ಪ್ರೊ. ಅನಿತಾ ಹೆಚ್.ಎಸ್., ಕುಲಸಚಿವರು (ಆಡಳಿತ) ಪ್ರೊ. ಗಾಯತ್ರಿ ದೇವರಾಜ್, ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top