Connect with us

Dvgsuddi Kannada | online news portal | Kannada news online

ಸರ್ಕಾರದ ಮಾರ್ಗಸೂಚಿಯಂತೆ ದಸರಾ, ಈದ್‍ ಮಿಲಾದ್ ಹಬ್ಬ ಆಚರಣೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ

ಸರ್ಕಾರದ ಮಾರ್ಗಸೂಚಿಯಂತೆ ದಸರಾ, ಈದ್‍ ಮಿಲಾದ್ ಹಬ್ಬ ಆಚರಣೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ದಸರಾ ಹಾಗೂ ಈದ್‍ ಮಿಲಾದ್  ಹಬ್ಬಗಳ ಆಚರಣೆಗಾಗಿ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಿಕೊಂಡು, ಸೌಹಾರ್ದಯುತವಾಗಿ ದಸರಾ ಹಾಗೂ ಈದ್‍ಮಿಲಾದ್ ಹಬ್ಬಗಳನ್ನು ಆಚರಿಸೋಣ, ಯಾವುದೇ ಸಾಮೂಹಿಕ ಮೆರವಣಿಗೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ದಸರಾ, ಈದ್‍ಮಿಲಾದ್ ಹಬ್ಬಗಳ ಆಚರಣೆ ನಿಮಿತ್ಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ನಾಗರಿಕ ಸೌಹಾರ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ನಂತಹ ಮಾರಕ ಸೋಂಕು ರೋಗ ಇಲ್ಲದ ಸಂದರ್ಭಗಳಲ್ಲಿ ನಾವು ಎಲ್ಲ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ವಿಜೃಭಣೆಯ ಮೆರವಣಿಗೆ ಸಹಿತ ಆಚರಿಸಿದ್ದೇವೆ. ಆದರೆ ಕೋವಿಡ್ ಸೋಂಕು ಕಳೆದೆರಡು ವರ್ಷಗಳಿಂದ ಇಂತಹ ವಿಜೃಂಭಣೆಯ ಆಚರಣೆಗಳಿಗೆ ತಡೆಹಾಕಿದ್ದು, ಎಲ್ಲರ ಆರೋಗ್ಯ ದೃಷ್ಟಿಯಿಂದ, ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯವಾಗಿದೆ. ಈ ಹಿಂದೆಯೂ ಕೂಡ ಎಲ್ಲ ಸಮಾಜದವರೂ, ಸರ್ಕಾರದ ಆದೇಶಗಳಂತೆ ಹಬ್ಬಗಳನ್ನು ಸರಳವಾಗಿ ಆಚರಿಸಿ, ಸಹಕರಿಸಿದ್ದರ ಫಲವಾಗಿ ಇದೀಗ ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ. ಆದಾಗ್ಯೂ ತಜ್ಞರ ಎಚ್ಚರಿಕೆ ಮೇರೆಗೆ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ ಎಂದರು.

ಈ ಬಾರಿಯ ದಸರಾ ಹಾಗೂ ಈದ್‍ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹಾಕಿದ್ದು, ನಿರ್ಬಂಧ ಸಡಿಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿಲ್ಲ, ಆದರೆ ಅಗತ್ಯಬಿದ್ದರೆ ಇನ್ನಷ್ಟು ನಿರ್ಬಂಧ ವಿಧಿಸಲು ಅವಕಾಶ ನೀಡಿದೆ. ಹೀಗಾಗಿ ಅ. 15 ರವರೆಗಿನ ದಸರಾ ಹಾಗೂ ಅ. 20 ರಂದು ಈದ್‍ಮಿಲಾದ್ ಎರಡೂ ಹಬ್ಬಗಳ ಆಚರಣೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸೋಣ, ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಬಗೆಯ ಸಾಮೂಹಿಕ ಮೆರವಣಿಗೆಗೆ ಅವಕಾಶ ಇರುವುದಿಲ್ಲ, ಈ ಆದೇಶವನ್ನು ಎಲ್ಲರೂ ಪಾಲಿಸಿ, ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಮಾತನಾಡಿ, ದಸರಾ ಹಾಗೂ ಈದ್‍ಮಿಲಾದ್ ಹಬ್ಬಗಳ ಆಚರಣೆಯನ್ನು ಭಕ್ತಿಪೂರ್ವಕ ಹಾಗೂ ಸೌಹಾರ್ದಯುತವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಆಚರಿಸೋಣ. ಹಬ್ಬಗಳ ಆಚರಣೆ ನಮಗೂ ಸಹ ಖುಷಿ ತರುವ ವಿಷಯವೇ ಆಗಿದ್ದು, ವಿಜೃಂಭಣೆಯ ಮೆರವಣಿಗೆಗಳನ್ನು ನಿರ್ಬಂಧಿಸುವುದರಿಂದ ನಮಗೂ ಕೂಡ ಖುಷಿ ದೊರೆಯುವುದಿಲ್ಲ. ಆದರೆ ಅನಿವಾರ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ. ಕಳೆದೆರಡು ವರ್ಷಗಳಿಂದ ಎಲ್ಲರೂ ಸಹಕರಿಸಿದ್ದಾರೆ. ಈ ಬಾರಿಯೂ ಎಲ್ಲರೂ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಮಾರಕ ರೋಗ ನಿಯಂತ್ರಣಗೊಂಡಲ್ಲಿ, ಎಲ್ಲರೂ ವಿಜೃಂಭಣೆಯಿಂದ ಮೆರವಣಿಗೆ ಸಹಿತ ಆಚರಿಸಬಹುದು ಎಂದು ಹೇಳಿದರು.

  • ದಸರಾ ಹಬ್ಬಕ್ಕೆ ಮಾರ್ಗಸೂಚಿ :
  • ಅ.7 ರಿಂದ ಅ.15 ಶುಕ್ರವಾರದವರೆಗೆ ಒಟ್ಟು 9 ದಿನಗಳ ಕಾಲ ಸರಳವಾಗಿ ಆಚರಿಸಬೇಕು
  • ಸಾಮೂಹಿಕ ಮೆರವಣಿಗೆ ನಡೆಸದಂತೆ ನಿಷೇಧ
  • ದಸರಾ ಕಾರ್ಯಕ್ರಮಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ
  • ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು
  • ಕೋವಿಡ್-19 ಸೋಂಕು ತಡೆಗಟ್ಟಲು ರಾಷ್ಟ್ರೀಯ ನಿರ್ದೇಶನಗಳನ್ನು ತಪ್ಪದೇ  ಪಾಲಿಸಬೇಕು

ಈದ್‍ಮಿಲಾದ್ ಹಬ್ಬ ಆಚರಣೆ ಮಾರ್ಗಸೂಚಿ : ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷದ ಈದ್‍ಮಿಲಾದ್ ಹಬ್ಬವನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕು. ಅ. 20 ರಂದು ಆಚರಿಸಲಾಗುವ ಈದ್‍ಮಿಲಾದ್ ಹಬ್ಬ ಆಚರಣೆಯಲ್ಲಿ ಸಾಮೂಹಿಕ ಮೆರೆವಣಿಗೆಯನ್ನು ನಿಷೇಧಿಸಲಾಗಿದೆ. ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ 100 ಕ್ಕಿಂತ ಹೆಚ್ಚು ಜನ ಒಮ್ಮೆಲೆ ಸೇರುವಂತಿಲ್ಲ, ಸಾಮೂಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್ ಶಿಷ್ಠಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಹಬ್ಬ ಆಚರಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ (ಡಿಜೆ) ಬಳಕೆ ನಿಷೇಧಿಸಲಾಗಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ಕೋವಿಡ್ ಸಮುಚಿತ ವರ್ತನೆಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ನಡೆಸಬೇಕು, ಒಂದು ವೇಳೆ ಹೆಚ್ಚು ಜನರು ಆಗಮಿಸಿದ್ದಲ್ಲಿ, ಎರಡು ಅಥವಾ ಹೆಚ್ಚಿನ ಪಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಂಡು, ಆಗಾಗ ಸೋಪು, ಸ್ಯಾನಿಟೈಸರ್ ಬಳಸಬೇಕು, ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡುವ ವ್ಯವಸ್ಥೆ ಮಾಡಬೇಕು.

ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂ, ಹಾಗೂ ಮುಸ್ಲಿಂ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬಗಳನ್ನು ಆಚರಿಸುವ ಮೂಲಕ ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದರು. ಅಲ್ಲದೆ ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಎರಡೂ ಹಬ್ಬಗಳಿಗೆ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು. ಆದರೆ ಜಿಲ್ಲಾಧಿಕಾರಿಗಳು ಮತ್ತು ಎಸ್‍ಪಿ ಅವರು ಸರ್ಕಾರದ ಮಾರ್ಗಸೂಚಿಯಂತೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜೀವ್ ಸೇರಿದಂತೆ ಎಲ್ಲ ಡಿವೈಎಸ್‍ಪಿಗಳು, ಪೊಲೀಸ್ ಇಲಾಖೆ ವಿವಿಧ ಅಧಿಕಾರಿಗಳು, ಹಿಂದೂ ಹಾಗೂ ಮುಸ್ಲಿಂ ಸಮಾಜದ ಹಲವು ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top