ದಾವಣಗೆರೆ: ಬಹುಶಿಸ್ತೀಯ ಜ್ಞಾನ ಹೊಂದುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು, ಕೈಗಾರಿಕೆಗಳಲ್ಲಿ ಬಹುಶಿಸ್ತೀಯ ಜ್ಞಾನ ಹೊಂದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಿಜಿಸ್ಟ್ರಾರ್ ಡಾ ಬಸವರಾಜಪ್ಪ ಎಸ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಜಿಎಂಐಟಿಯಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಫ್ರೆಷರ್ಸ್ ಡೇ” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಇಲ್ಲಿ ಮಾತನಾಡಿದರು. ಎಲ್ಲಾ ತಂತ್ರಜ್ಞಾನದ ಜ್ಞಾನವನ್ನು ಹೊಂದುವುದು ಮತ್ತು ಬೇರೆ ವಿಭಾಗದ ತಂತ್ರಜ್ಞಾನಗಳ ಅರಿವು ಹೊಂದುವುದು ಅತಿ ಮುಖ್ಯ. ಮೆಕ್ಯಾನಿಕಲ್ ಓದುವ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಜ್ಞಾನವನ್ನು ಮತ್ತು ಕಂಪ್ಯೂಟರ್ ಸೈನ್ಸ್ ಓದುವ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಜ್ಞಾನವನ್ನು ಹಾಗೆಯೇ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಓದುವ ವಿದ್ಯಾರ್ಥಿಗಳು ಎಲೆಕ್ಟ್ರಿಕಲ್ ಜ್ಞಾನವನ್ನು ಹೊಂದುವುದು ಅತ್ಯಾವಶ್ಯಕ. ಇಂದಿನ ಕೈಗಾರಿಕಾ ಅವಶ್ಯಕತೆಗಳು ಬಹು ಶಿಸ್ತೀಯ ಜ್ಞಾನವನ್ನು ವಿದ್ಯಾರ್ಥಿಗಳಿಂದ ನಿರೀಕ್ಷಿಸುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನದ ಮೂಲಕ ಉದ್ಯೋಗ ಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಬಹುದು ಎಂದರು.
ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕಾಲೇಜಿನ ಆವರಣದಲ್ಲಿ ಮನೆಯ ವಾತಾವರಣವನ್ನು ನಿರ್ಮಿಸಿತ್ತು. ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡುಗೆಯಲ್ಲಿ ಮಿಂಚುತ್ತಿದ್ದಿದ್ದು ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು. ಹೊಸ ವಿದ್ಯಾರ್ಥಿಗಳ ಪರಿಚಯ ಮತ್ತು ಹೊಸ ವಿಚಾರಗಳ ವಿನಿಮಯ ಕ್ಯಾಂಪಸ್ ನಲ್ಲಿ ಎದ್ದು ಕಾಣುತ್ತಿತ್ತು.
ಬೆಳಗ್ಗೆ 9:30ಕ್ಕೆ ವಿದ್ಯಾರ್ಥಿಗಳು ತಮ್ಮ ತಮ್ಮ ವಿಭಾಗಕ್ಕೆ ಪೋಷಕರೊಡನೆ ಹಾಜರಿದ್ದು, ಜಿಎಂಐಟಿಯಿಂದ ಕೊಡಲ್ಪಟ್ಟ ಬೇಸಿಕ್ ಕಿಟ್ ಸ್ವೀಕರಿಸಿದರು. ಮೊದಲ ವರ್ಷದ 700+ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸೇರಿ 1500 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ವಿಶೇಷ ಅತಿಥಿಗಳಾಗಿ ಆಡಳಿತ ಮಂಡಳಿಯ ಸದಸ್ಯ ಸುಭಾಷ್ ಚಂದ್ರ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ವೈ ವಿಜಯಕುಮಾರ್ ವಹಿಸಿದ್ದರು. ಇನ್ಫೋರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಸುನಿಲ್ ಕುಮಾರ್ ಬಿಎಸ್ ಸ್ವಾಗತ ಭಾಷಣವನ್ನು ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರವೀಣ್ ಜೆ ವಂದನಾರ್ಪಣೆಯನ್ನು ನೆರವೇರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಜಿಎಂಐಟಿ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿ ತಿಳಿಸಿಕೊಟ್ಟರು. ವೇದಿಕೆ ಮೇಲೆ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.



