Connect with us

Dvgsuddi Kannada | online news portal | Kannada news online

ದಾವಣಗೆರೆ: ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು ಮನಸ್ಸಿಗಲ್ಲ: ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ

FB IMG 1670079002535

ದಾವಣಗೆರೆ

ದಾವಣಗೆರೆ: ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು ಮನಸ್ಸಿಗಲ್ಲ: ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ

ದಾವಣಗೆರೆ: ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ. ಸಾಧಿಸುವ ಛಲ ಹಾಗೂ ಪರಿಶ್ರಮವಿದ್ದರೆ ವಿಕಲಚೇತನರೂ ಕೂಡ ಸಾಮಾನ್ಯರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ವಿಕಲಚೇತನರು ಸಹ ಉನ್ನತ ಗುರಿ ಇಟ್ಟುಕೊಂಡು ಸಮಾಜದ ಉನ್ನತಿಗೆ ಶ್ರಮಿಸುವ ಅಗತ್ಯವಿದೆ. ಸಾಮಾನ್ಯರು ಕೂಡ ಇವರಿಂದ ಸ್ಪೂರ್ತಿ ಪಡೆದುಕೊಳ್ಳುವಂತಾಗಿದೆ. ವಿಕಲಾಂಗತೆ ಹೊಂದಿರುವವರು ಮಾನಸಿಕವಾಗಿ ಸದೃಢವಾಗಬೇಕು ಅಂದಾಗ ಮಾತ್ರ ಅಂಗವಿಕಲತೆ ಅಡ್ಡಿಯಾಗುವುದಿಲ್ಲ. ಸರ್ಕಾರದ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಕಲಚೇತನರಿಗೆ ಅನುದಾನ ಮೀಸಲಿರಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರದ ಸೌಲಭ್ಯ ಪಡೆಯುತ್ತಿರುವ ವಿಕಲಚೇತನರು, ಇತರರಿಗೂ ಯೋಜನೆಯ ಸವಲತ್ತು ತಲುಪುವಂತೆ ಮಾಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ವಿಕಲಚೇತನರ ಹಿತಕ್ಕಾಗಿ ಮಾಡುವ ಸೇವೆ ಶ್ರೇಷ್ಠ ಮಟ್ಟದ್ದಾಗಿದ್ದು, ನಿಜಕ್ಕೂ ಖುಷಿ ನೀಡುತ್ತದೆ. ವಿಕಲತೆಯನ್ನು ಶಾಪ ಎಂದು ಚಿಂತಿಸಬಾರದು. ಒಂದೇ ಕಾಲಿನಲ್ಲಿ ಮೌಂಟ್‍ಎವೆರೆಸ್ಟ್ ಶಿಖರ ಏರಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಅಂತಹವರ ಸಾಧನೆಯನ್ನು ಸ್ಪೂತಿಯಾಗಿ ತೆಗೆದುಕೊಳ್ಳಬೇಕು. ವಿಶೇಷ ಸಾಧನೆ ಮಾಡಿರುವ ವಿಕಲಚೇತರನ್ನು ಮಾದರಿಯನ್ನಾಗಿಟ್ಟುಕೊಂಡು ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಜೀವನದಲ್ಲಿ ನಾವು ಯಾರಿಗೂ ಹೊರೆಯಾಗಿರಬಾರದು ಎಂದು ನಿಮ್ಮ ಆಶಯಗಳನ್ನು ನಮಗೆ ತಿಳಿಸಿದ್ದೀರಿ. ನಿಮ್ಮ ಜೊತೆಯಾಗಿ, ನಿಮ್ಮ ಕಷ್ಟಗಳಿಗೆ ಬೆನ್ನೆಲುಬಾಗಿ ಜಿಲ್ಲಾಡಳಿತ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ವಿಶೇಷಚೇತನರ ಬಾಳಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಮಾಡಲು ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರವೀಣ ನಾಯಕ್ ಮಾತನಾಡಿ, ಜಗತ್ತಿನ ಅದ್ಭುತ ಪ್ರತಿಭೆಗಳೆಂದರೆ ವಿಶೇಷಚೇತನರು. ಅವರು ಪ್ರತಿಭೆಗಳ ನಿಧಿಯೇ ಆಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಹೊರ ಹಾಕುವುದನ್ನು ನೋಡುತ್ತಿದ್ದೇವೆ ಎಂದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಕೆ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನರಿಗೆ ದೇಶಾದ್ಯಂತ ಏಕ ಮಾದರಿಯ ಯುನಿಕ್ ಐಡಿ ಕಾರ್ಡ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 22,933 ವಿಕಲಚೇತನರ ಪೈಕಿ ಈವರೆಗೆ 9323 ಜನ ಮಾತ್ರ ಯೂನಿಕ್ ಐಡಿ ಕಾರ್ಡ್ ಪಡೆದಿದ್ದಾರೆ. ಪ್ರತಿಯೊಬ್ಬರೂ ಯೂನಿಕ್ ಐಡಿ ಕಾರ್ಡ್ ಪಡೆಯುವುದು ಕಡ್ಡಾಯವಾಗಿದೆ. ಬಸ್ ಪಾಸ್‍ಗಾಗಿ ಕಚೇರಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇನ್ನು ಮುಂದೆ ಕೆಎಸ್‍ಆರ್‍ಟಿಸಿ ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಬಸ್ ಪಾಸ್ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಡಾ.ಎ ಚೆನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ನಗರದ ಯೋಜನಾ ಅಧಿಕಾರಿ ಡಾ.ಮಹಾಂತೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಮ.ಮ.ಅ.ಇ.ಯ ಉಪನಿರ್ದೇಶಕ ಧರಣಿಕುಮಾರ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top