ದಾವಣಗೆರೆ; ಮಾರ್ಚ್ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ ಜೂನ್ ತಿಂಗಳಲ್ಲಿ ಪೊಲೀಸ್ ಇಲಾಖೆ ಹೆಲ್ಮೆಟ್ ಉಲ್ಲಂಘನೆ ನೋಟಿಸ್ ಕಳುಹಿಸಿದ್ದು, ಆ ನೋಟಿಸ್ ನವೆಂಬರ್ ತಿಂಗಳಲ್ಲಿ ನಿಗದಿತ ವಿಳಾಸಕ್ಕೆ ತಲುಪಿದೆ.
ಮಾರ್ಚ್ ನಲ್ಲಿ ಮೃತಪಟ್ಟ ಶಾಮನೂರಿನ ವಾಮದೇವಪ್ಪ ಎಂಬುವರ ಮನೆ ವಿಳಾಸಕ್ಕೆ ನವೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆ ನೋಟಿಸ್ ಕಳುಹಿಸಿದೆ. ಜೂನ್ 29 ರಂದು ದಾವಣಗೆರೆಯ ಆಜಾದ್ ನಗರ ಮುಖ್ಯ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸಿದ್ದಾರೆಂದು 500 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಈ ನೋಟಿಸ್ ಅನ್ನು ಜುಲೈ 22 ರಂದು ಕಳುಹಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ನಮಗೆ ತಲುಪಿದೆ. ಈ ನೋಟಿಸ್ ನಲ್ಲಿ ತಿಳಿಸಿದ ನೋಂದಣಿ ಸಂಖ್ಯೆ ಬೈಕ್ ನಮ್ಮದಲ್ಲ ಎಂದು ಮೃತ ವಾಮದೇವಪ್ಪ ಅಳಿಯ ಮಹದೇವಪ್ಪ ತಿಳಿಸಿದ್ದಾರೆ.



