ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ದೂರು ಕೇಳಿ ಬಂದ ಕಾರಣ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.
ಪಾಲಿಕೆ ಎದುರಿನ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪ ಹೊಸ ಮತ್ತು ಹಳೆ ಚರಂಡಿ ಸಂಪರ್ಕಿಸುವ ಕಾಮಗಾರಿ ನಡೆಸಲಾಗುತ್ತಿದೆ. ಈ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಮಂಡಿಪೇಟೆ ಸೇರಿದಂತೆ ವ್ಯಾಪಾರ ವಹಿವಾಟಿಗೆ ಸಂಚರಿಸುವ ಜನರಿಗೆ ತುಂಬಾನೇ ಸಮಸ್ಯೆಯಾಗಿದೆ. ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ.
ಜನರು ಸಹ ಬೈಕ್ ಗಳಲ್ಲಿ ಓಡಾಡಲು ಆಗುತ್ತಿಲ್ಲ. ಈ ಕೆಲಸ ಆರಂಭಿಸಿ ತುಂಬಾ ದಿನಗಳಾಗುತ್ತಾ ಬಂದಿದ್ದರೂ ವೇಗವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಡಿಗುಡಾಳ್ ಮಂಜುನಾಥ್ ಅವರಿಗೆ ಜನರು ಅಳಲು ತೋಡಿಕೊಂಡಿದ್ದರು. ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸುವಂತೆ ಮನವಿ ಮಾಡಿದ್ದರು. ಅಂಗಡಿಗಳಿಗೆ ಹೋಗುವ ವ್ಯಾಪಾರಿಗಳು, ಖರೀದಿಗೆ ಹೋಗುವ ಗ್ರಾಹಕರು ನಿತ್ಯವು ಅನುಭವಿಸುತ್ತಿರುವ ಪಾಡಂತೂ ಹೇಳತೀರದ್ದು. ಜನರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಬಂದ ಮಂಜುನಾಥ್ ಅವರು, ಎಂಜಿನಿಯರ್ ಗಳಾದ ಶಿವರಾಜ್ ಹಾಗೂ ಪುನೀತ್ ಅವರನ್ನು ಸ್ಥಳಕ್ಕೆ ಕರೆಯಿಸಿ, ಕಾಮಗಾರಿ ಕುರಿತಂತೆ ಮಾಹಿತಿ ಪಡೆದರು. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರ ಸಮಸ್ಯೆ ಪರಿಹರಿಸಿ ಎಂದು ಹೇಳಿದರು.
ಎಪಿಎಂಸಿ ಸಮೀಪದ ರಾಜಕಾಲುವೆಯದ್ದೂ ಸಹ ಇದೇ ಸಮಸ್ಯೆ. ಇಲ್ಲಿನ ಜನರು ಮತ್ತು ವರ್ತಕರು ವಿರೋಧ ಪಕ್ಷದ ನಾಯಕರ ಗಮನಕ್ಕೆ ತಂದರು. ಇಲ್ಲಿಗೂ ಸಹ ಭೇಟಿ ನೀಡಿದ ಮಂಜುನಾಥ್ ಅವರು, ಸ್ಥಳ ವೀಕ್ಷಿಸಿದರು. ಸ್ಮಾರ್ಟ್ ಸಿಟಿಯ ಎಂಜಿನಿಯರ್ ಸತೀಶ್ ಅವರಿಗೆ ಮಂಜುನಾಥ್ ಮೊಬೈಲ್ ನಲ್ಲಿ ಕರೆ ಮಾಡಿ ಎಪಿಎಂಸಿಗೆ ಸರಕು ಸಾಗಣೆ ಹೊತ್ತ ಲಾರಿಗಳ ಓಡಾಟ ಜಾಸ್ತಿಯಾಗಿರುತ್ತದೆ. ರಾಜಕಾಲುವೆಗೆ ಕಾಂಕ್ರಿಟ್ ಆಗಿರುವುದು ಎತ್ತರವಾಗಿದೆ. ಮುಂಬರುವ ದಿನಗಳಲ್ಲಿ ಲಾರಿಗಳನ್ನು ತಿರುಗಿಸಲು ಕಷ್ಟವಾಗಬಹುದು. ಪಕ್ಕದಲ್ಲಿ ರಸ್ತೆ ಇರುವ ಕಾರಣ ಚಾಲಕರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ರ್ಯಾಂಪ್ ಅನ್ನು ವೈಜ್ಞಾನಿಕವಾಗಿ ಮಾಡಿ. ಲಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್, ಸರಿಯಾಗಿ ರ್ಯಾಂಪ್ ಅಳವಡಿಸುತ್ತೇವೆ. ಲಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳು ವೇಗವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಬಂದಿದೆ. ಇದು ನಮ್ಮ ಆರೋಪ ಅಲ್ಲ. ಸ್ಥಳೀಯರೇ ಹೇಳುತ್ತಿದ್ದಾರೆ. ರಾಜಕಾಲುವೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಿ. ಎಪಿಎಂಸಿ ಮೇಲ್ಸೇತುವೆ ಕೆಳಗಡೆ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನಿತ್ಯವೂ ಸಾವಿರಾರು ವಾಹನಗಳ ಓಡಾಟ ಇದ್ದೇ ಇರುತ್ತದೆ. ಕಾಮಗಾರಿ ಮಂದಗತಿಯಲ್ಲಿ ಸಾಗಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಪ್ರೀತಂ ಅವರಿಗೆ ಮಂಜುನಾಥ್ ಅವರು ಸೂಚಿಸಿದರು. ಈ ವೇಳೆ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್ ಸಾಬ್, ಮೀನಾಕ್ಷಿ ಜಗದೀಶ್ ಅವರು ಹಾಜರಿದ್ದರು.