ದಾವಣಗೆರೆ: ಭಾರೀ ಮಳೆಗೆ ಭದ್ರಾ ಬಲದಂಡೆ ನಾಲೆಯ ದಾವಣಗೆರೆ ಶಾಖಾ ಕಾಲುವೆ ತೊಟ್ಟಿಲು ನಲ್ಕುಂದ ಗ್ರಾಮದ ಬಳಿ ಕೊಚ್ಚಿ ಹೋಗಿದ್ದು, ತುರ್ತಾಗಿ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ತೊಟ್ಟಿಲು ದುರಸ್ಥಿ ಕಾರ್ಯ ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿರುವುದರಿಂದ ಸಂಬಂಧಪಟ್ಟ ರೈತರು ಇಲಾಖೆಯೊಂದಿಗೆ ಸಹಕರಿಸುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸುಜಾತ.ಎನ್ ತಿಳಿಸಿದ್ದಾರೆ.
ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಭದ್ರಾ ಬಲದಂಡೆ ನಾಲೆಯ ದಾವಣಗೆರೆ ಶಾಖಾ ಕಾಲುವೆಗೆ ಮಳೆ ನೀರು ಸೇರಿಕೊಂಡ ಪರಿಣಾಮವಾಗಿ ಸರಪಳಿ 35.50 ಕಿ.ಮೀ.ನಲ್ಲಿ ಬರುವ ನಲ್ಕುಂದ ಗ್ರಾಮದ ಸಮೀಪ ಅಕ್ವಡಕ್ಟ್ ನ ಎಕ್ಸಿಟ್ ಟ್ರಾನ್ಸಿಷನ್ ಮಣ್ಣಿನ ಏರಿಯ ಮೇಲೆ ನೀರು ಹರಿದು ಅಕ್ವಡಕ್ಟ್‍ನ ರಕ್ಷಣಾ ತಡೆಗೋಡೆ ಕುಸಿದು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು.