ದಾವಣಗೆರೆ: ಕೇಂದ್ರ ಸರ್ಕಾರ ರೈತರ ನೆರವಿಗಾಗಿ ಸಾಲ ಹೆಚ್ಚಳ ಮಾಡಿದೆ. ಬ್ಯಾಂಕ್‌ಗೆ ರೈತರನ್ನು ಅಲೆದಾಡಿಸದೇ ಸಾಲ ಒದಗಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಸಭೆಯಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಸಾಲ ಮತ್ತು ಮನೆ ಸಾಲ ನೀಡಲು 192.13 ಕೋಟಿ ಗುರಿ ಹೊಂದಲಾಗಿತ್ತು. ಇದರಲ್ಲಿ 48.85 ಕೋಟಿ ಸಾಲ ಒದಗಿಸಲಾಗಿದೆ. ಮುದ್ರಾ ಬ್ಯಾಂಕ್ ಯೋಜನೆಯಡಿ 29,413 ಕೋಟಿ ಗುರಿ ಇತ್ತು. ಅದರಲ್ಲಿ ಶೇ 82ರಷ್ಟು ಗುರಿ ಸಾಧಿಸಲಾಗಿದೆ. ಕೃಷಿಗೆ 5,744.49 ಕೋಟಿ ಸಾಲ ಒದಗಿಸಲಾಗಿದೆ ಎಂದು ವಿವರಿಸಿದರು.
ದಾವಣಗೆರೆ ಉತ್ತರ, ದಕ್ಷಿಣ ಮತ್ತು ಮಾಯಕೊಂಡ ಕ್ಷೇತ್ರ ಒಗ್ಗೂಡಿಸಿ ದಾವಣಗೆರೆಯಲ್ಲಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಸೇರಿಸಿಕೊಂಡು ಹೊನ್ನಾಳಿ, ಜಗಳೂರು, ಚನ್ನಗಿರಿ, ಜಗಳೂರುನಲ್ಲಿ ಸಾಲಮೇಳ ನಡೆಸ ಬೇಕು. ಸರಿಯಾದ ದಾಖಲೆ ಸಲ್ಲಿಸದಿದ್ದಲ್ಲಿ ಅಲ್ಲಿಯೆ ಸರಿಪಡಿಸಿ, ಮಾಹಿತಿ ನೀಡಬೇಕು. ಗೃಹ ಸಾಲ ಮತ್ತು ಮುಖ್ಯವಾಗಿ ಶೈಕ್ಷಣಿಕ ಸಾಲ ನೀಡಬೇಕು. ಯಾರೋ ಒಂದಿಬ್ಬರು ಸಾಲ ಮರುಪಾವತಿಸಿಲ್ಲ ಎಂದು ಎಲ್ಲರಿಗೂ ಸಾಲ ನೀಡದೇ ಇರುವುದು ಸರಿ ಅಲ್ಲ. ವಿದ್ಯಾರ್ಥಿಗಳಿಗೆ ಸಾಲ ಒದಗಿಸುವ ಮೂಲಕ ಶಿಕ್ಷಣದಲ್ಲಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸೂಚಿಸಿದರು.
ಮಂಡಕ್ಕಿಯನ್ನು ರಸ್ತೆಯಲ್ಲಿಯೇ ಒಣಗಿಸಲಾಗುತ್ತಿದೆ.ಅಲ್ಲೇ ಹಂದಿ, ನಾಯಿಗಳೂ ಓಡಾಡುತ್ತಿವೆ. ಹೀಗಾಗದಂತೆ ಮಾಡಬೇಕಿದ್ದರೆ ಮಂಡಕ್ಕಿ ಭಟ್ಟಿಗಳು ಆಧುನೀಕರಣಗೊಳ್ಳಬೇಕು. ಆಧುನೀಕಣಗೊಳಿಸಲು ಬ್ಯಾಂಜ್ ಗಳು ಸಾಲ ಸೌಲಭ್ಯ ನೀಡಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಐ ಎಲ್‌ಎಡಿ ಸಹಾಯಕ ವ್ಯವಸ್ಥಾಪಕ ಮುರಳಿ ಮೋಹನ ಪಟಕ್, ನಬಾರ್ಡ್ ಡಿಡಿಎಂ ರಶ್ಮಿ ರೇಖಾ, ಕೆನರಾ ಬ್ಯಾಂಕ್‌ನ ರವಿಕಲಾ, ಉಪ ಕಾರ್ಯದರ್ಶಿ ಮಲ್ಲನಾಯ್ಕ್ ಇದ್ದರು.