ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಪರವಾನಿಗೆ ಕೋರಿ ವರ್ತಕರು ಅರ್ಜಿ ಸಲ್ಲಿಸಿದ್ದು, ಜಿಎಸ್‍ಟಿ ಕಾಯ್ದೆಯಡಿ ಪಟಾಕಿ ಸರಕು ತೆರಿಗೆದಾಯಕ ಸರಕಾಗಿದ್ದು, ವರ್ತಕರು ತಮ್ಮ ಮುಖ್ಯ ವ್ಯಾಪಾರ ಸ್ಥಳವನ್ನು ಹೊರತುಪಡಿಸಿ ಬೇರೆ ಕಡೆ ವ್ಯಾಪಾರ ನಡೆಸಲು ಸಂಬಂಧಿಸಿದ ವ್ಯಾಪ್ತಿಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಮತ್ತು ಎಲ್‍ಜಿಎಸ್‍ಟಿಓ ಕಛೇರಿಗಳಲ್ಲಿ ಹೆಚ್ಚುವರಿಯಾಗಿ ತಾತ್ಕಾಲಿಕ ನೋಂದಣಿ ಪಡೆಯುವುದು ಅನೋಂದಾಯಿತ ವರ್ತಕರು ತಾತ್ಕಾಲಿಕ ನೋಂದಣೆ ಪಡೆಯುವುದು ಜಿಎಸ್‍ಟಿ ಕಾಯ್ದೆಯಡಿ ಕಡ್ಡಾಯವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ವ್ಯಾಪಾರ ವಹಿವಟು ಪ್ರಾರಂಭವಾದಲ್ಲಿ ವರ್ತಕರಿಗೆ ನೋಂದಣಿ ನೀಡುವ ಪ್ರಕ್ರಿಯೆ ಜಾರಿಗೊಳಿಸಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ವರ್ತಕರು ಪಟಾಕಿ ವ್ಯಾಪಾರ ಮಾಡಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಎಸ್‍ಟಿ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಷರತ್ತು ವಿಧಿಸಲು ಕೋರಲಾಗಿದೆ.
ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ತಾತ್ಕಾಲಿಕ ಪಟಾಕಿ ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿದಾರರು ಕಚೇರಿಯಿಂದ ಪರವಾನಿಗೆ ಪಡೆಯುವ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‍ಟಿ ಕಾಯ್ದೆಯಡಿ ಕಡ್ಡಾಯವಾಗಿ ಖಾಯಂ ಅಥವಾ ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಿದಲ್ಲಿ ಮಾತ್ರ ಪರವಾನಿಗೆದಾರರಿಗೆ ಅನುಕೂಲವಾಗುವಂತೆ ಪರವಾನಿಗೆ ಪತ್ರದಲ್ಲಿ ಜಿಎಸ್‍ಟಿ ನೋಂದಣಿಯನ್ನು ನಮೂದು ಮಾಡಿ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು (ಜಾರಿ) ದಾವಣಗೆರೆ ಇವರನ್ನು ಸಂಪರ್ಕಿಸಬಹುದಾಗಿದೆ.



