ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಬುಳ್ಳಾಪುರ ಗ್ರಾಮ ದೇವತೆ ಹೊನ್ನತ್ತಮ್ಮ ದೇವಸ್ಥಾನ ಆವರಣದಲ್ಲಿ ಅದ್ಧೂರಿಯಾಗಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ.
ಸೋಮವಾರ ಘಟ ಸ್ಥಾಪನೆ ಮಾಡಿ, ಉತ್ಸವ ಮೂರ್ತಿಗೆ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಚಾಲನೆ ದೊರೆಯಿತು. ಇದಕ್ಕೂ ಮೊದಲು ಗ್ರಾಮದ ಬಾವಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ, ಘಟ ಮತ್ತು ಉತ್ಸವ ಮೂರ್ತಿಯನ್ನು ಮುಖ್ಯ ಬೀದಿಯಲ್ಲಿ ಸಂಭ್ರಮದಿಂದ ಮೆರವಣಿಗೆ ಮೂಲಕ ದೇವಸ್ಥಾನ ಆವರಣಕ್ಕೆ ತರಲಾಯಿತು.
“ಜೋಡಿ ಪ್ರಣತಿ”ಯ ಆರತಿಯೊಂದಿಗೆ ಪಾಲ್ಗೊಂಡಿದ್ದ ಮಹಿಳೆಯರು ಅಖಂಡ ಮಹಾ ಮಂಗಳಾರತಿ ಬೆಳಗಿದರು.
ಬಳಿಕ, ಗ್ರಾಮದ ದಾನಿಯೊಬ್ಬರಿಂದ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಗ್ರಾಮದ ಬಸವೇಶ್ವರ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ನಿತ್ಯ ಸಂಜೆ ಒಂದೊಂದು ಬಗೆಯ ಆರತಿಗಳನ್ನು ಬೆಳಗುವ ಮೂಲಕ ಮಹಿಳೆಯರು ಅಖಂಡ ಮಂಗಳಾರತಿ ನೆರವೇರಿಸುವರು. ನಿತ್ಯ ಒಬ್ಬೊಬ್ಬ ದಾಸೋಹಿಗಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಗ್ರಾಮದ ವಿನಾಯಕ ಯುವಕ ಬಳಗ ಪ್ರಸಕ್ತ ವರ್ಷ ಗಣೇಶೋತ್ಸವವನ್ನು ಸರಳವಾಗಿ ಆಚರಿಸಿ, ದೇವಸ್ಥಾನಕ್ಕೆ 40,000 ಮೊತ್ತವನ್ನು ದೇಣಿಗೆ ನೀಡಿ ಮಾದರಿಯಾಗಿದ್ದಾರೆ. ಇದರ ಜತೆ ಗ್ರಾಮಸ್ಥರು, ಭಕ್ತರು ನೀಡಿದ ದೇಣಿಗೆ ಸೇರಿಸಿ ಒಂದೂವರೆ ಲಕ್ಷ ವೆಚ್ಚದಲ್ಲಿ ದೇವಸ್ಥಾನ ಆವರಣದಲ್ಲಿ ಶೀಟ್ ಹಾಕಿಸಲಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಶಿರಸಿಯ ಕಲಾವಿದರಿಂದ ನಿರ್ಮಿಸಿ ತಲಾಗಿರುವ ಹೊನ್ನತ್ತಮ್ಮ ದೇವಿಯ ಉತ್ಸವ ಮೂರ್ತಿ, ಸುಂದರವಾಗಿ ಕಂಗೊಳಿಸುತ್ತಿದ್ದು, ಉತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಸ್ಥರು, ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.



