ದಾವಣಗೆರೆ: ನಗರದ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೆ.17 ರಂದು 262 ನೇ ಅನಂತನ ಹುಣ್ಣಿಮೆ ಮತ್ತು ಗಾನಯೋಗಿ ಪಂಚಾಕ್ಷರ ಗವಾಯಿಗಳ 78ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 12ನೇ ಪುಣ್ಯಸ್ಮರಣೋತ್ಸವ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತಡಿದ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್.ಶಿವಮೂರ್ತಿಸ್ವಾಮಿ, ಅಂದು ಬೆಳಗ್ಗೆ 7.30ಕ್ಕೆ ನಗರದ ಆಂಜನೇಯ ಮಿಲ್ ಮುಂಭಾಗದಿಂದ ಪುಣ್ಯಾಶ್ರಮದವರೆಗೆ ಉಭಯ ಪೂಜ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 10 ಗಂಟೆಗೆ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಇವರ ಸಾನ್ನಿಧ್ಯದಲ್ಲಿ ನಡೆಯಲಿರುವ ಧರ್ಮಸಭೆಯನ್ನು ಶಾಸಕ ಡಾ. ಶಾಮನೂರು
ಶಿವಶಂಕರಪ್ಪ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿಸ್ವಾಮಿ, ಭರತನಾಟ್ಯ ಕಲಾವಿದ ಅಶ್ವಥ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಉಮೇಶ್ ಬಣಕಾರ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಶಿವಮೂರ್ತಿಸ್ವಾಮಿ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಶಾಸಕ ಎಸ್.ರವೀಂದ್ರನಾಥ್, ಈಶ್ವರ ಪಾರ್ವತಿ ದೇವಸ್ಥಾನ ಅಧ್ಯಕ್ಷ ಬೆಳವನೂರು ನಾಗರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಂಜುನಾಥ್ ಕುರ್ಕಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಲಿಂ.ಯರೇಕುಪ್ಪಿ ಹಿರೇಮಠದ ತಿಪ್ಪಯ್ಯನವರ ಸ್ಮರಣಾರ್ಥ ಧಾರವಾಡದ ಪಂಡಿತ ಡಿ. ಕುಮಾರದಾಸ ಇವರಿಗೆ 25 ಸಾವಿರ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಶ್ರೀ ಗುರು ಪುಟ್ಟರಾಜ ಪುರಸ್ಕಾರ ನೀಡಲಾಗುವುದು. ಕರಿಬಸಪ್ಪ ಜಾಲಿಮರದ, ಎ.ಎಸ್.ಮೃತ್ಯುಂಜಯ, ಕಲ್ಲಪ್ಪ ಇದ್ದರು.



