ದಾವಣಗೆರೆ: ವಾಕ್ ಮತ್ತು ಶ್ರವಣದೋಷವುಳ್ಳ ವಿಕಲಚೇತನರ ಕುಂದು-ಕೊರತೆ ಸಭೆಯನ್ನು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಗೆ ಶ್ರವಣದೋಷ ವ್ಯಕ್ತಿಗಳು ಭೇಟಿ ನೀಡಿದಾಗ ತಕ್ಷಣ ಅವರ ಕುಂದುಕೊರತೆಯನ್ನು ಆಲಿಸತಕ್ಕದ್ದು, ಪ್ರತಿ 3 ತಿಂಗಳಿಗೊಮ್ಮೆ ಶ್ರವಣದೋಷ ವಿಕಲಚೇತನರ ಕುಂದು-ಕೊರತೆಯನ್ನು ಆಲಿಸಬೇಕು. ಜಿಲ್ಲೆಯ ಎಲ್ಲಾ ಶ್ರವಣದೋಷವುಳ್ಳ ವಿಕಲಚೇತನರ ವೈಯಕ್ತಿಕ ವಿವರವನ್ನು ಪಡೆದುಕೊಳ್ಳಬೇಕು. ಶ್ರವಣದೋಷವುಳ್ಳ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕಲ್ಪಿಸುವುದು ಹಾಗೂ ಉತ್ತಮವಾದ ಶ್ರವಣ ಸಾಧನ ಪರಿಕರಗಳನ್ನು ವಿತರಿಸತಕ್ಕದ್ದು, ವಿಕಲಚೇತನರಿಗೆ ಮೀಸಲಿರಿಸಿದ ವಿವಿಧ ಇಲಾಖೆ ಮತ್ತು ನಿಗಮಗಳ ಶೇ.5ರ ಅನುದಾನದ ಬಗ್ಗೆ ಶೀಘ್ರದಲ್ಲೇ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಕಿವುಡ ಮತ್ತು ಮೂಗರ ಸಂಘದ ಅಧ್ಯಕ್ಷರಾದ ರಾಜಶೇಖರ ಬಿ.ಕೆ.ಪಿ ಹಾಗೂ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು..
ಸಭೆಯಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಪ್ರಕಾಶ್, ಹಾಗೂ ಸಂಜ್ಞೆ ಭಾಷೆ ತರ್ಜಿಮೆದಾರರು ಹಾಗೂ ಜಿಲ್ಲಾ ವಿಕಲಚೇತನರ ಸಹಾಯವಾಣಿ ಸಿಬ್ಬಂದಿಗಳಾದ ಜೆ. ದುರುಗೇಶ ಹಾಗೂ ಮಾರುತಿ ಬಿ.ಎಸ್, ಜಿಲ್ಲಾ ಕಿವುಡರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಾಜರಿದ್ದರು.