ದಾವಣಗೆರೆ: ಕರ್ನಾಟಕ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ಹಾಗೂ ಶ್ರೀಸಾಯಿ ಫಿಟ್ ನೆಸ್ ವತಿಯಿಂದ ಆ.13, 14 ರಂದು ಡಿಸಿಎಂ ಟೌನ್ ಶಿಪ್ ನಲ್ಲಿರುವ ಎಂ ಎಸ್ ಎಂ ಪ್ಲಾಜಾದಲ್ಲಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಸಾಯಿ ಫಿಟ್ ನೆಸ್ ಮಾಲೀಕರು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಕೆ.ಎಸ್. ಸಾಯಿನಾಥ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರನ್ನು ಸೆಪ್ಟೆಂಬರ್ ನಲ್ಲಿ ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಸ್ಪರ್ಧೆಯು ಸೀನಿಯರ್, ಜೂನಿಯರ್ ಹಾಗೂ ಮಾಸ್ಟರ್ ವಿಭಾಗದಲ್ಲಿ ಮಹಿಳಾ ಹಾಗೂ ಪುರುಷರಿಗೆ ಏರ್ಪಡಿಸಲಾಗಿದೆ.
ಸ್ಪರ್ದೆ ಉದ್ಘಾಟನೆಯನ್ನು ಅಂದು ಬೆಳಿಗ್ಗೆ 10 ಗಂಟೆಗೆ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಶಿಧರ್ ಮಳಲಕೆರೆ, ವೀರೇಶ್ ಪೈಲ್ವಾನ್, ಶಿವನಳ್ಳಿ ರಮೇಶ್ , ಉದ್ಯಮಿ ಎಂ. ಆನಂದ್, ಮೇಯರ್ ಜಯ್ಯಮ್ಮ ಗೋಪಿನಾಯ್ಕ್, ದೇವರಮನಿ ಶಿವಕುಮಾರ್ ಭಾಗವಹಿಸಲಿದ್ದಾರೆ. ಆ.14 ರಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಭಾಗವಹಿಲಿದ್ದಾರೆ. ಎಂದರು.
ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಜೇತರಿಗೆ ಪದಕ ಹಾಗೂ ಸರ್ಟಿಫಿಕೇಟ್ ವಿತರಿಸಲಾಗುವುದು. ಹಾಗೂ ಕರ್ನಾಟಕ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಬಾರಿಯ ಜೀವಮಾನ ಪ್ರಶಸ್ತಿಯನ್ನು ಕ್ರೀಡಾಪಟು ಲಕ್ಷ್ಮೀಕಾಂತ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ್, ವಿರೂಪಾಕ್ಷಪ್ಪ, ಹೆಚ್.ವಿ. ಶಶಿಧರ್ ಎಸ್.ಹೆಚ್. ಮಂಜುನಾಥ್, ಬಿ. ಗೋಪಾಲ್, ಅಕ್ರಂ ಬಾಷಾ ಇನ್ನಿತರರಿದ್ದರು.



