ದಾವಣಗೆರೆ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಸೆಪ್ಟಂಬರ್ 30 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್‍ರವರು ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಬಯಸಿದ್ದು, ಈಗ ಮತ್ತೊಮ್ಮೆ ಪ್ರಾಧಿಕಾರವು ಸೆ.30 ರಂದು ಮೆಗಾ ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಹೀಗಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮೆಗಾ ಲೋಕ್ ಅದಾಲತ್‍ನ್ನು ಸೆ. 30 ರಂದು ಆಯೋಜಿಸಲಾಗಿದೆ.
ಮೆಗಾ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಮೆಗಾ ಲೋಕ್ ಅದಾಲತ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು.
ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಚೇದನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಕೋವಿಡ್-19 ಸೋಂಕಿನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಅವಕಾಶವಿದೆ. ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಕಕ್ಷಿಗಾರರು ಭೌತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.
ಕಳೆದ ಆ.14 ರಂದು ಜರುಗಿದ ಮೆಗಾ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ 8050 ಪ್ರಕರಣಗಳು ಇತ್ಯರ್ಥಗೊಂಡು 13.88 ಕೋಟಿ ರೂ. ಗಳ ಪರಿಹಾರ ಒದಗಿಸಲಾಗಿದೆ. ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಜೀವ ವಿಮಾ ನಿಗಮ ಅಧಿಕರಿಗಳು, ವಕೀಲರು, ಎಂ.ವಿ.ಸಿ ಪ್ರಕರಣದ ಅರ್ಜಿದಾರ ವಕೀಲರುಗಳು, ಭೂ ವಿಜ್ಞಾನ ಇಲಾಖೆ, ಬ್ಯಾಂಕ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಸೇರಿದಂತೆ ಲೋಕ್ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಸಾರ್ವಜನಿಕರು ಮೆಗಾ ಲೋಕ್ ಅದಾಲತ್ ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕಿರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಇವರನ್ನು ದೂ.ಸ:08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195 ಮತ್ತು ಜಗಳೂರು 08196-227600 ಇವರನ್ನು ಸಂಪರ್ಕಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ಪ್ರವೀಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.