ದಾವಣಗೆರೆ: ಕೆಸರು ಗದ್ದೆಯಂತಾದ ರಸ್ತೆ, ಸುತ್ತಲೂ ಭಯಾನಕ ಕಾಡು, ರಾತ್ರಿಯಾದ್ರೆ ಸಾಕು ಕಾಡು ಪ್ರಾಣಿಗಳ ಹಾವಳಿ. ಬಸ್ ಅಂತೂ ದೂರದ ಮಾತು…. ಈ ಕುಗ್ರಾಮಕ್ಕೆ ಹೋಗುವುದೇ ಒಂದು ದೊಡ್ಡ ಸಾಹಸ…! ಇನ್ನು ಊರಿಗೆ ಕನ್ಯೆ ನೋಡಲು ಬರುವವರು ರಸ್ತೆ ನೋಡಿಯೇ ರಿಜೆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ಈ ಊರಿನ ಯುವತಿಯೊಬ್ಬಳು ನಮ್ಮೂರಿಗೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಶಪಥ ಮಾಡಿದ್ದಾಳೆ.
ಇದು ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಎಚ್. ರಾಂಪುರ ಸ್ಥಿತಿಗತಿ. ಈ ಊರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಗ್ರಾಮದ ಯುವತಿ- ಯುವಕರಿಗೆ ಮದುವೆ ಭಾಗ್ಯವಿಲ್ಲದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿ ಸೂಕ್ತ ರಸ್ತೆ, ಬಸ್ ವ್ಯವಸ್ಥೆ ಇಲ್ಲವಾಗಿದೆ. ಸುಮಾರು ಒಂದೂವರೆ ಕಿಲೋಮೀಟರ್ ವರೆಗೆ ರಸ್ತೆ ಹಾಳಾಗಿದೆ. ಸರಿಯಾಗಿ ಮೊಬೈಲ್ ನೆಟ್ವರ್ಕ್ ಕೂಡ ಸಿಗಲ್ಲ. ಕಾಡು, ಗುಡ್ಡ ಗಾಡಿನ ಮಧ್ಯೆ ಇದ್ದು, ಈ ಗ್ರಾಮದ ಯುವಕ-ಯುವತಿಯರನ್ನು ಮದುವೆಯಾಗಲು ಹಿಂದೇಟು ಹಾಕಿತ್ತಿದ್ದಾರೆ. ಹೀಗಾಗಿ ನಮ್ಮೂರಿಗೆ ಬಸ್, ರಸ್ತೆ ಆಗುವವರೆಗೂ ನಾನು ಮದುವೆ ಆಗಲ್ಲ ಎಂದು ಯುವತಿ ಬಿಂದು ಪಟ್ಟು ಹಿಡಿದಿದ್ದಾಳೆ.
ಹೆದ್ನೆ ಮತ್ತು ಹೆಚ್.ರಾಂಪುರದ ಮಧ್ಯೆ ಒಂದುವರೆ ಕಿಲೋ ಮೀಟರ್ ರಸ್ತೆ ಹಾಳಾಗಿದ್ದು ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ, ರಸ್ತೆಯಿಲ್ಲದೆ ಬಸ್ ಬರಲ್ಲ ಕುಗ್ರಾಮದ ಸಂಬಂಧ ಬೇಡ ಎಂದು ಜನ ಹಿಂದೇಟು ಹಾಕುತ್ತಿದ್ದಾರೆ. ಹೆಚ್ ರಾಂಪುರಕ್ಕೆ ರಸ್ತೆಯಾಗುವವರೆಗೂ ನಾನು ಮದುವೆ ಆಗಲ್ಲ ಎಂದು ಸಿಎಂ, ಪಿಎಂ ವರೆಗೂ ಪತ್ರ ಬರೆದಿದ್ದರೂ ನಮ್ಮೂರಿನ ಒಂದೂವರೆ ಕಿಲೋ ಮೀಟರ್ ರಸ್ತೆಯಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಯುವತಿಯ ಪತ್ರಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.