ಚನ್ನಗಿರಿ: ದಾವಣಗೆರೆ ಜನರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ನಾನು ಮೊದಲು ಧಾರವಾಡದ ಹೆಸರನ್ನು ಹೊಗಳುತ್ತಿದ್ದೆ. ಇನ್ನುಂದೆ ದಾವಣಗೆರೆ ಹೆಸರು ನೆನಪು ಮಾಡಿಕೊಳ್ಳುತ್ತೇನೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಕೆಲಸ ಮಾಡಿದ ಕಡೆ ನನ್ನ ಛಾಪು ಬಿಟ್ಟು ಹೋವುದು ನನ್ನ ಹವ್ಯಾಸ. ಅದರಂತೆ ಜಿಲ್ಲೆಯಲ್ಲಿ ನೆನಪುಗಳನ್ನು ಬಿಟ್ಟು ಹೋಗುತ್ತಿದ್ದೇನೆ. ಅಧಿಕಾರಿಗಳು ವರ್ಗಾವಣೆಯಾದರೆ ಇಲ್ಲಿಂದ ಹೋದರೆ ಸಾಕು ಎಂದು ಜನ ಹೇಳುತ್ತಾರೆ. ನನ್ನನ್ನು ವರ್ಗಾವಣೆ ನಂತರವು ಕರೆದು ಪ್ರೀತಿ ತೋರಿಸುತ್ತಿದ್ದಾರೆ. ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡಿದ್ದೇನೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ನೀಡಿದ ಸ್ವಾತಂತ್ರ್ಯ ಮತ್ತು ಮಾರ್ಗದರ್ಶನ ನನಗೆ ಸ್ಫೂರ್ತಿ ನೀಡಿತು. ಅಧಿಕಾರಿಗಳ ಸಹಾಯದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುವ ಕೆಲಸ ಮಾಡಲಾಗಿದೆ ಎಂದರು.ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ, ತಹಸೀಲ್ದಾರ್ ಡಾ.ಪಟ್ಟರಾಜಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ಪ್ರಕಾಶ್. ಪುರಸಭೆ ಮುಖ್ಯಾಧಿಕಾರಿ ಕೆ.ಪರಮೇಶ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇದ್ದರು.



