ದಾವಣಗೆರೆ: ನಗರದ ಹೊರವಲಯದ ಚಿಕ್ಕಬೂದಿಹಾಳು ಹಾಗೂ ದೊಡ್ಡ ಬೂದಿಹಾಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಂದಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾದ ಆಶ್ರಯದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾದ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು, ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳಿಗೆ ನಗರದ ಹಂದಿಗಳನ್ನು ತಂದು ಬಿಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಹಗಲು ರಾತ್ರಿ ನಿದ್ದೆಗೆಟ್ಟು ಬೆಳೆದ ಬೆಳೆಗಳು ಹಂದಿಗಳಿಂದ ನಾಶವಾಗುತ್ತಿವೆ. ರಾತ್ರಿಯಿಡಿ ಅವುಗಳನ್ನು ಕಾಯುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಕೂಡಲೇ ಹಂದಿಗಳ ಹಾವಳಿಯನ್ನು ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಯಂತ್ರಣ ಮಾಡಬೇಕಾಗಿದೆ. ಅವುಗಳ ಸಂತಾನ ಹರಣ ಮಾಡುವ ಮೂಲಕ ಬೇರೆಡೆ ವರ್ಗಾಯಿಸಬೇಕೆಂದು ಆಗ್ರಹಿಸಿದರು. ಇದೀಗ ನಿರಂತರ ಮಳೆಯಾಗುತ್ತಿದ್ದು ಈಗಾಗಲೇ ಭತ್ತವನ್ನು ಬಿತ್ತನೆ ಮಾಡಲಾಗಿದೆ. ಆದರೆ ಹಂದಿಗಳ ಹಾವಳಿಗಳಿಂದಾಗಿ ಭತ್ತದ ಮಡಿ ಹಾಳುಮಾಡುತ್ತಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಕೂಡಲೇ ಹಂದಿ ಮಾಲೀಕರ ಸಭೆಗಳನ್ನು ಕರೆದು ಹಂದಿಗಳನ್ನು ಹೊರಗೆ ಬಿಡದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುರೇಶ, ಹನುಮಂತಪ್ಪ, ಪ್ರಜ್ವಲ್, ಜಯಣ್ಣ, ಸಿದ್ಧಪ್ಪ, ರುದ್ರಪ್ಪ, ಹನುಮಂತಪ್ಪ, ಅಣ್ಣಪ್ಪಸ್ವಾಮಿ, ಬಸವರಾಜ್, ಮಂಜುನಾಥ್, ರವೀಂದ್ರಾಚಾರ್, ಮಾರುತಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.