ದಾವಣಗೆರೆ: 2013 ರಲ್ಲಿ ತುಮಕೂರು ಬಳಿ ರಸ್ತೆ ದಾಟುವಾಗ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿ ವ್ಯಕ್ತಿಗೆ ಪರಿಹಾರ ನೀಡದ ನಾಲ್ಕು ಬಸ್ ಗಳನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜೀವ್ ಪಾಟೀಲ್ ಗೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಂಜೀವ ಪಾಟೀಲ್ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್, 2.15 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು.
ಕೋರ್ಟ್ ಆದೇಶದಂತೆ ಆರಂಭದಲ್ಲಿ 1.73 ಕೋಟಿ ಪರಿಹಾರ ನೀಡಿದ್ದ ವಾಯುವ್ಯ ಸಾರಿಗೆ ನಂತರ ಪರಿಹಾರದ ಹಣವನ್ನು ನೀಡಿರಲಿಲ್ಲ. ಹೀಗಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಬಾಕಿ ಹಣ ನೀಡದ ಸಾರಿಗೆ ಇಲಾಖೆಯ ಬಸ್ ಜಪ್ತಿ ಮಾಡುವಂತೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಹಾವೇರಿ ಡಿಪೋಗೆ ಸೇರಿದ ನಾಲ್ಕು ಸಾರಿಗೆ ಬಸ್ ಗಳನ್ನು ಕುಟುಂಬಸ್ಥರು ಇಂದು ದಾವಣಗೆರೆಯಲ್ಲಿ ಜಪ್ತಿ ಮಾಡಿದರು.



