ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗಿಯಾಗಿ ವಧು-ವರರಿಗೆ ಶುಭ ಹಾರೈಸಿದರು.
ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಬಕ್ಕೇಶ್ ಪುತ್ರಿ ಅಕ್ಷತಾ ಬಿ. ಶಾಮನೂರು ಮತ್ತು ಚಿನ್ನು ಪಾಟೀಲ್‌ರ ಪುತ್ರ ಅಭಿಷೇಕ್ ಪಾಟೀಲ್ ಜೊತೆ ವಿವಾಹ ನೆರವೇರಿತು. ಸಿಎಂ ಜತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಭೈರತಿ ಬಸವರಾಜ್, ಜೆ. ಸಿ. ಮಾಧುಸ್ವಾಮಿ, ಅಮೃತ್ ದೇಸಾಯಿ ಭಾಗಿಯಾಗಿದ್ದರು. ಮದುವೆ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪರ 92ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು. ಈ ವೇಳೆ ಸಿಎಂ, ಶಾಮನೂರು ಶಿವಶಂಕರಪ್ಪ ಚರ್ಚಿಸಿದರು.
ಬಿಜೆಪಿ ನಾಯಕರ ಆಗಮನದ ಬಗ್ಗೆ ಶಾಮನೂರು ಶಿವಶಂಕರಪ್ಪ ಮಾತನಾಡಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಬಸವರಾಜ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಹಾಗೂ ಎಂ. ಬಿ. ಪಾಟೀಲ್ ಸಂಬಂಧಿಕರು. ನಾವು ವೀರಶೈವ ಲಿಂಗಾಯತರು. ನಾವೆಲ್ಲಾ ಒಂದೇ, ಎಲ್ಲರೂ ಜೊತೆಗಿದ್ದೇವೆ. ಯಾರು ಸಿಎಂ ಆಗುತ್ತಾರೆ ಎಂಬುದನ್ನು ಮುಂಬರುವ ದಿನಗಳಲ್ಲಿ ನೋಡೋಣ, ಈಗ ಚರ್ಚೆ ಬೇಡ. ಜ್ಯೋತಿಷ್ಯ ಹೇಳಲು ನಾನೇನೂ ಕೋಡಿಮಠದ ಸ್ವಾಮೀಜಿ ಅಲ್ಲ ಎಂದರು.
ಒಂದು ಫ್ಯಾಮಿಲಿಗೆ ಒಂದು ಟಿಕೆಟ್ ಎಂಬ ವಿಚಾರ ನಮಗೆ ಅನ್ವಯಿಲ್ಲ. ಇನ್ನು ನಮ್ಮ ಕುಟುಂಬದ ನಾಲ್ವರಿಗೆ ಟಿಕೆಟ್ ಕೊಡಿಸಬಹುದು. ಆದರೆ, ಗೆಲ್ಲಬೇಕಲಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನನ್ನು ಬಿಟ್ಟು ಇನ್ಯಾರು ಸ್ಪರ್ಧೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.