ದಾವಣಗೆರೆ: ಜನಸಾಮಾನ್ಯರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಬಳಿ ದೇವಾಲಯ ಹಾಗೂ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕೇಳುವ ಬದಲು, ತಮ್ಮ ಗ್ರಾಮಕ್ಕೆ ಅಗತ್ಯವಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ದಾವಣಗೆರೆ ತಾಲ್ಲೂಕಿನ ನಲ್ಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಯಾನಂದ ಓ.ಎಸ್ ದಂಪತಿಗಳು ಕೊಡುಗೆಯಾಗಿ ನಿರ್ಮಿಸಲಾದ 4 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಪೀಳಿಗೆಯನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸುವ ಕಾರ್ಯ ಶಾಲೆಯಿಂದಲೇ ಶುರುವಾಗುತ್ತದೆ, ಹಾಗಾಗಿ ದೇವಾಲಯ ನಿರ್ಮಾಣಕ್ಕಿಂತಲೂ ಪುಣ್ಯವಾದ ಕೆಲಸ ಶಾಲೆಗಳನ್ನು ನಿರ್ಮಾಣ ಮಾಡುವುದಾಗಿದೆ. ಅನೇಕ ಜನರು ತಾವು ಓದಿದ ಊರು ಮರೆತು ಪಟ್ಟಣ ಸೇರುತ್ತಾರೆ, ಆದರೆ ದಯಾನಂದ ಓ. ಎಸ್ ಮತ್ತು ಕುಟುಂಬದವರು ತಮಗೆ ಬದುಕು ಕಟ್ಟಿಕೊಟ್ಟ ಊರನ್ನು ಮರೆಯದೆ, ತಾವು ಓದಿದ್ದ ಶಾಲೆಗೆ ಕಟ್ಟಡಗಳನ್ನು ನಿರ್ಮಾಣ ಮಾಡುವುದರ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ದಯಾನಂದ ಕುಟುಂಬದ ಕಾರ್ಯವನ್ನು ಶ್ಲಾಘಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ ರವೀಂದ್ರನಾಥ್ ಮಾತನಾಡಿ, ಆಧುನಿಕ ದಿನಗಳಲ್ಲಿ ಅನೇಕರು ಹಳ್ಳಿಗಳಲ್ಲಿ ಓದಿ ದೊಡ್ಡ ದೊಡ್ಡ ಮಹಾನಗರಗಳನ್ನು ಸೇರಿ ತಾವು ಹುಟ್ಟಿದ ಊರನ್ನು ಮರೆಯುತ್ತಾರೆ. ಇಂತಹ ವರ್ತಮಾನ ಕಾಲದಲ್ಲಿ ದಯಾನಂದ ಮತ್ತು ಕುಟುಂಬದವರ ಸಾಮಾಜಿಕ ಸೇವೆ ಅನೇಕರಿಗೆ ಆದರ್ಶವಾಗಲಿ. ರೈತರಿಗೆ ಬೆಂಬಲ ಬೆಲೆ ಹಾಗೂ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ಒದಗಿಸುವಂತೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿ ಎಂದು ಕೃಷಿ ಸಚಿವರಿಗೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ, ಕಟ್ಟಡದ ದಾನಿಗಳಾದ ದಯಾನಂದ ಓ. ಎಸ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ ಮೂರ್ತಿ, ಮಾಜಿ ಶಾಸಕ ಬಸವರಾಜ್ ನಾಯಕ್, ಶಿವಮೊಗ್ಗ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಅಜಗಣ್ಣ, ಸುರೇಶ್, ಸಿದ್ದರಾಮ ರೆಡ್ಡಿ, ಸುನಂದಮ್ಮ ಓ.ಶಿವಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ಜಮೀಲಾ ಬಾನು ಸಮೀವುಲ್ಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.



