ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ (ನಂ-106) ಸಂಬಂಧಿಸಿದಂತೆ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಚುನಾವಣಾ ಆಯೋಗದ ಮೂಲಕ ಆಯೋಜಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಗಳು ಹಾಗೂ ಉಪ ಆಯುಕ್ತರು(ಕಂದಾಯ) ಮಹಾನಗರ ಪಾಲಿಕೆ ದಾವಣಗೆರೆ ಇವರು ತಿಳಿಸಿದ್ದಾರೆ.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಮೇಲ್ವಿಚಾರಕರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳು ದೋಷ ಮುಕ್ತ ಮತದಾರರ ಪಟ್ಟಿಯನ್ನು ತಯಾರಿಸಲು ಮತಗಟ್ಟೆಗಳ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಲಿದ್ದು, 18 ವರ್ಷ ಪೂರ್ಣಗೊಳ್ಳುವವರು, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು, ಹೆಸರು ಕೈಬಿಟ್ಟು ಹೋಗಿರುವವರು, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಒಂದೇ ವಿಧಾನಸಭಾ ಕ್ಷೇತ್ರದ ಮತದಾರರು ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದವರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡತಕ್ಕದ್ದು, ಅದಲ್ಲದೇ www.nvsp.in ಅಂತರ್ಜಾಲದ (ಇಂಟರ್ ನೆಟ್) ತಂತ್ರಾಂಶದಲ್ಲಿ ಹಾಗೂvoter help line App ನ ಮೂಲಕ ಅರ್ಜಿಗಳನ್ನು ನೋಂದಾಯಿಸಬಹುದಾಗಿರುತ್ತದೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅರ್ಹ ಮತದಾರರನ್ನು ಸೇರ್ಪಡೆ, ಸ್ಥಳಾಂತರಗೊಂಡ ಮತದಾರನ್ನು ತೆಗೆದುಹಾಕುವಿಕೆ ಹಾಗೂ ಮತದಾರರ ಪಟ್ಟಿಯಲ್ಲಿನ ಲೋಪವನ್ನು ಸರಿಪಡಿಸುವ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.